ಬೆಂಗಳೂರು: ಕೊರೋನಾದಿಂದ ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ರಾಜ್ಯ ಸರ್ಕಾರ ‘ಬಾಲ ಸೇವಾ ಯೋಜನೆ’ ಘೋಷಿಸಿದೆ.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಈ ಬಗ್ಗೆ ಮಾಹಿತಿ ನೀಡಿದ್ದು, ಕೊರೋನಾ ಸೋಂಕಿನಿಂದ ಪೋಷಕರನ್ನು ಕಳೆದುಕೊಂಡು ಅನಾಥನಾದ ಮಕ್ಕಳ ರಕ್ಷಣೆ, ಊಟ, ವಸತಿ, ಶಿಕ್ಷಣ ಮತ್ತು ಉದ್ಯೋಗಕ್ಕಾಗಿ ಮಾಸಿಕ 3500 ರೂಪಾಯಿ ನೀಡಲಾಗುವುದು ಎಂದು ತಿಳಿಸಿದ್ದಾರೆ.
ವಿಸ್ತೃತ ಕುಟುಂಬ ಸದಸ್ಯರ ಆರೈಕೆಯಲ್ಲಿರುವ ಮಕ್ಕಳಿಗೆ ಪ್ರತಿ ತಿಂಗಳು 3500 ರೂ. ಸಹಾಯಧನ ನೀಡಲಾಗುತ್ತದೆ. 10 ವರ್ಷದೊಳಗಿನ ಮಕ್ಕಳ ಪಾಲನೆಗೆ ಕುಟುಂಬ ಸದಸ್ಯರು ಇಲ್ಲದಿದ್ದರೆ ಅಂತಹ ಮಕ್ಕಳನ್ನು ನೋಂದಾಯಿತ ಮಕ್ಕಳ ಪಾಲನಾ ಕೇಂದ್ರಕ್ಕೆ ದಾಖಲಿಸಿ ಆರೈಕೆ ಮಾಡಲಾಗುತ್ತದೆ.
ಎಸ್ಎಸ್ಎಲ್ಸಿ ಪೂರ್ಣಗೊಳಿಸಿದ ಮಕ್ಕಳಿಗೆ ಉನ್ನತ ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿಗಾಗಿ ಉಚಿತವಾಗಿ ಲ್ಯಾಪ್ಟಾಪ್, ಟ್ಯಾಬ್ ನೀಡಲಾಗುವುದು.
21 ವರ್ಷ ತುಂಬಿದ ಹೆಣ್ಣು ಮಕ್ಕಳಿಗೆ ಉನ್ನತ ಶಿಕ್ಷಣ, ಮದುವೆ, ಸ್ವಯಂ ಉದ್ಯೋಗ ಇತರೆ ಉದ್ದೇಶಗಳಿಗೆ 1 ಲಕ್ಷ ರೂಪಾಯಿ ಸಹಾಯಧನ ನೀಡಲಾಗುತ್ತದೆ.
ಅನಾಥರಾದ ಮಕ್ಕಳಿಗೆ ಮಾರ್ಗದರ್ಶಿ ಅಥವಾ ಹಿತೈಷಿ ನೇಮಿಸಿ ಅವರ ಸರ್ವತೋಮುಖ ಬೆಳವಣಿಗೆಗೆ ಪ್ರೋತ್ಸಾಹ ನೀಡಲಾಗುತ್ತದೆ.