ಬೆಂಗಳೂರು: ಬೆಂಗಳೂರಿನಲ್ಲಿ ಪುಂಡರು ಮತ್ತೆ ಅಟ್ಟಹಾಸ ಮೆರೆದಿದ್ದಾರೆ. ಬೇಕರಿಯೊಂದಕ್ಕೆ ನುಗ್ಗಿ ಗಾಜು ಒಡೆದು ಆಹಾರ ಉತ್ಪನ್ನಗಳನ್ನು ರಸ್ತೆಗೆ ಎಸೆದು ದಾಂಧಲೆ ಮಾಡಿದ್ದಾರೆ.
ಬ್ಯಾಡರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ತುಂಗಾನಗರ ಮುಖ್ಯ ರಸ್ತೆಯಲ್ಲಿ ಘಟನೆ ನಡೆದಿದೆ. ಚಂದ್ರಶೇಖರ್ ಎಂಬುವರಿಗೆ ಸೇರಿದ ಮಂಜುನಾಥ ಕೇಕ್ ಕಾರ್ನರ್ಸ್ ಬೇಕರಿಯಲ್ಲಿ ಗಲಾಟೆ ನಡೆದಿದ್ದು, ಘಟನೆಯ ದೃಶ್ಯಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.
ಆಗಸ್ಟ್ 16ರಂದು ಸಂಜೆ 5 ಗಂಟೆ ಸುಮಾರಿಗೆ ಎರಡು ಬೈಕ್ ಗಳಲ್ಲಿ ಬಂದಿದ್ದ ನಾಲ್ವರು ಪುಂಡರು ಏಕಾಏಕಿ ದಾಂಧಲೆ ಮಾಡಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂದಿಸಿ ಬೇಕರಿ ಗಾಜಿನ ಮೇಲೆ ಕಲ್ಲು ಎತ್ತಿ ಹಾಕಿ ಒಡೆದು ಹಾಕಿದ್ದಾರೆ. ಬೇಕರಿ ತಿನಿಸುಗಳನ್ನು ಚೆಲ್ಲಾಪಿಲ್ಲಿ ಮಾಡಿ ರಸ್ತೆಗೆ ಎಸೆದು ಪರಾರಿಯಾಗಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಬ್ಯಾಡರಹಳ್ಳಿ ಠಾಣೆ ಪೋಲೀಸರು ದುಷ್ಕರ್ಮಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.