ಕರ್ನಾಟಕ ವಿಧಾನಸಭೆ ಚುನಾವಣೆಗೆ ಮುನ್ನ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಭಜರಂಗದಳ ನಿಷೇಧದ ಬಗ್ಗೆ ಪ್ರಸ್ತಾಪಿಸಿದ್ದು ಭಾರೀ ಕೋಲಾಹಲ ಸೃಷ್ಟಿಸಿತ್ತು. ಇದು ಕಾಂಗ್ರೆಸ್ ಗೆ ಚುನಾವಣಾ ಫಲಿತಾಂಶದಲ್ಲಿ ಹಿನ್ನಡೆಯಾಗಬಹುದೆಂದೇ ಹೇಳಲಾಗಿತ್ತು. ಆದರೆ ಕಾಂಗ್ರೆಸ್ ಬಹುಮತದತ್ತ ಸಾಗ್ತಿದ್ದು ವಿಜಯೋತ್ಸವದಲ್ಲಿದೆ. ಈ ಸಂಭ್ರಮಾಚರಣೆ ವೇಳೆಯಲ್ಲಿ ಕಾಂಗ್ರೆಸ್ ಭಜರಂಗಬಲಿಯ ವೇಷ ಧರಿಸಿ ಎದುರಾಳಿ ಬಿಜೆಪಿಗೆ ತಿರುಗೇಟು ಕೊಟ್ಟಿದೆ.
ಕರ್ನಾಟಕದಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸುತ್ತಿದ್ದಂತೆ ದೆಹಲಿಯ ಕಾಂಗ್ರೆಸ್ ಪ್ರಧಾನ ಕಛೇರಿಯಲ್ಲಿ ಸಂಭ್ರಮಾಚರಣೆ ಆರಂಭವಾಗಿದೆ. ಹಲವಾರು ಕಾಂಗ್ರೆಸ್ ಕಾರ್ಯಕರ್ತರು ಬಜರಂಗ ಬಲಿ ಹನುಮಾನ್ ವೇಷ ಧರಿಸಿ, ಬಿಜೆಪಿ ಮತ್ತು ಬಲಪಂಥೀಯರನ್ನು ಟೀಕಿಸಿದರು.
“ಭಜರಂಗ ಬಲಿ ಬಿಜೆಪಿ ಕೆ ನಹೀ ಕಾಂಗ್ರೆಸ್ ಕೇ ಸಾಥ್ ಹೈ…… ಭಜರಂಗಬಲಿ ನೇ ಬಿಜೆಪಿ ಪರ್ ಫೈನ್ ಲಗಾಯಾ ಹೈ (ಭಜರಂಗಬಲಿ ಭಗವಾನ್ ಕಾಂಗ್ರೆಸ್ ಜೊತೆಗಿದ್ದಾನೆ. ಬಿಜೆಪಿಗೆ ದಂಡ ಹಾಕಿದ್ದಾನೆ) ಎಂದು ಹನುಮಂತನ ವೇಷಭೂಷಣ ಧರಿಸಿದ ಕಾರ್ಯಕರ್ತರು ಘೋಷಣೆ ಕೂಗಿದರು.
ರಾಜ್ಯಕ್ಕೆ ಪ್ರಚಾರಕ್ಕೆ ಬಂದಿದ್ದ ಪ್ರಧಾನಿ ಮೋದಿ ಸಹ ಕಾಂಗ್ರೆಸ್ ನ ಟೀಕಿಸಿ ತಮ್ಮ ಭಾಷಣದ ಆರಂಭದಲ್ಲೇ ಜೈ ಭಜರಂಗಬಲಿ ಎಂದು ಘೋಷಣೆ ಕೂಗಿದ್ದರು. ಆದರೆ ಇದು ರಾಜ್ಯ ಚುನಾವಣಾ ಫಲಿತಾಂಶದಲ್ಲಿ ವರ್ಕೌಟ್ ಆಗಿಲ್ಲ ಎಂಬುದು ಗೊತ್ತಾಗಿದೆ.