ಬೆಂಗಳೂರು: ಐಎಂಎ ಬಹುಕೋಟಿ ರೂ. ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐನಿಂದ ಬಂಧಿತರಾಗಿರುವ ಮಾಜಿ ಸಚಿವ ರೋಷನ್ ಬೇಗ್ ಅವರು ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲು ಸೇರಿದ್ದಾರೆ.
ಅವರಿಗೆ ವಿಚಾರಣಾಧೀನ ಕೈದಿ ಸಂಖ್ಯೆ 8823 ನೀಡಲಾಗಿದೆ. ಈ ನಡುವೆ ಜೈಲು ಸೇರುತ್ತಿದ್ದಂತೆ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಜೈಲಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಜೈಲಿನ ವೈದ್ಯಾಧಿಕಾರಿ ಡಾ. ಉಮಾ ಅವರು ರೋಷನ್ ಬೇಗ್ ಅವರಿಗೆ ಚಿಕಿತ್ಸೆ ನೀಡಿದ್ದಾರೆ. ಹಿಂದೆ ಹೃದಯ ಸಂಬಂಧಿತ ಕಾಯಿಲೆಗೆ ಚಿಕಿತ್ಸೆ ಪಡೆದುಕೊಂಡಿರುವ ರೋಷನ್ ಬೇಗ್ ಬಿಪಿ, ಶುಗರ್, ಹೃದ್ರೋಗ ಸಮಸ್ಯೆಗಳಿರುವ ಅವರು ಮೆಡಿಕಲ್ ಡಯೆಟ್ ನಲ್ಲಿದ್ದಾರೆ.
ಐಎಂಎ ಬಹುಕೋಟಿ ರೂ. ಕೇಸ್ ನಲ್ಲಿ ಸಿಬಿಐನಿಂದ ಬಂಧಿತರಾಗಿರುವ ರೋಷನ್ ಬೇಗ್ ಜಾಮೀನು ಅರ್ಜಿ ವಿಚಾರಣೆ ನಾಳೆ ನಡೆಯಲಿದೆ. ನಿನ್ನೆ ಎರಡು ಸಲ ತಮ್ಮ ವಕೀಲರ ಜೊತೆ ರೋಷನ್ ಬೇಗ್ ಮಾತುಕತೆ ನಡೆಸಿದ್ದಾರೆ. ಹೇಗಾದರೂ ಮಾಡಿ ಕೊಡಬೇಕೆಂದು ಮನವಿ ಜೈಲಿನಲ್ಲಿರುವ ಫೋನ್ ನಿಂದ ಕರೆ ಮಾಡಿ ವಕೀಲರೊಂದಿಗೆ ಚರ್ಚೆ ನಡೆಸಿದ್ದಾರೆ ಎಂದು ಹೇಳಲಾಗಿದೆ.
ನಿನ್ನೆ ರೋಷನ್ ಬೇಗ್ ಅವರ ನಿವಾಸದಲ್ಲಿ ಸಿಬಿಐ ಅಧಿಕಾರಿಗಳು ಶೋಧ ನಡೆಸಿದ್ದಾರೆ. ಕರ್ನಾಟಕ ಹಣಕಾಸು ಸಂಸ್ಥೆಗಳಲ್ಲಿ ಠೇವಣಿದಾರರ ಹಿತಾಸಕ್ತಿ ಸಂರಕ್ಷಣೆ ನಿಯಮದ ಪ್ರಕಾರ ಅವರ ಆಸ್ತಿಯನ್ನು ಜಪ್ತಿ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.