ಬಾಗಲಕೋಟೆ: ಅನೈತಿಕ ಸಂಬಂಧ ಮತ್ತು ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಮಹಿಳೆಯೊಬ್ಬಳು ಮಗನನ್ನೇ ಕೊಲೆ ಮಾಡಿದ ಪ್ರಕರಣ ಪೊಲೀಸರ ತನಿಖೆಯಲ್ಲಿ ಬಯಲಾಗಿದೆ.
24 ವರ್ಷದ ವಸಂತ ಕೊಲೆಯಾದ ವ್ಯಕ್ತಿ. ಜೂನ್ 19 ರಂದು ಬೆಳಗಿನ ಜಾವ ವಸಂತನ ದತ್ತು ಪಡೆದಿದ್ದ ತಾಯಿ ಕಮಲವ್ವ ಆಕೆಯ ಅಳಿಯಂದಿರಾದ ಭೀಮಪ್ಪ, ಸಿಂಧೂರ ಮತ್ತು ಕಮಲವ್ವಳ ಪ್ರಿಯಕರ ನಿಂಗಪ್ಪ ಸೇರಿಕೊಂಡು ಕತ್ತು, ಮರ್ಮಾಂಗ ಹಿಸುಕಿ, ಎದೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದಾರೆ. ನಂತರ ಚೀಲದಲ್ಲಿ ಶವ ತುಂಬಿಕೊಂಡು ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಮುರಗೋಡ ಪೊಲೀಸ್ ಠಾಣೆ ವ್ಯಾಪ್ತಿಯ ದಾಸನಾಳ ಸೀಮೆ ಕಾಲುವೆಯಲ್ಲಿ ಎಸೆದಿದ್ದಾರೆ.
ಜುಲೈ 6ರಂದು ಮಗ ನಾಪತ್ತೆಯಾಗಿರುವುದಾಗಿ ಲೋಕಾಪುರ ಠಾಣೆಗೆ ಕಮಲವ್ವ ದೂರು ನೀಡಿದ್ದಾಳೆ. ಪೊಲೀಸರು ತನಿಖೆ ಕೈಗೊಂಡ ಸಂದರ್ಭದಲ್ಲಿ ದೂರು ನೀಡಿದವರಿಂದ ಅನುಮಾನಾಸ್ಪದ ನಡವಳಿಕೆ ಕಂಡು ಬಂದಿದೆ. ಪೊಲೀಸರು ತನಿಖೆ ಮುಂದುವರೆಸಿದಾಗ ಕಮಲವ್ವ ತನ್ನ ಅಳಿಯಂದಿರು ಮತ್ತು ಪ್ರಿಯಕರನೊಂದಿಗೆ ಸೇರಿಕೊಂಡು ದತ್ತು ಮಗನನ್ನೇ ಕೊಲೆ ಮಾಡಿರುವುದು ಗೊತ್ತಾಗಿದೆ. ಮಗಳ ಗಂಡನ ತಂದೆ ನಿಂಗಪ್ಪನೊಂದಿಗೆ ಕಮಲವ್ವ ಅಕ್ರಮ ಸಂಬಂಧ ಬೆಳೆಸಿದ್ದು, ಇದಕ್ಕೆ ವಸಂತ ಅಡ್ಡಿಯಾಗುತ್ತಾನೆ ಮತ್ತು ಆತನಿಗೆ ಆಸ್ತಿ ಕೊಡಬೇಕಾಗುತ್ತದೆ ಎನ್ನುವ ಕಾರಣಕ್ಕೆ ಸಂಚು ರೂಪಿಸಿ ಕೊಲೆ ಮಾಡಿದ್ದಾರೆ. ಲೋಕಾಪುರ ಠಾಣೆ ಪೊಲೀಸರು ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.