
ಬಾಗಲಕೋಟೆ: ಕಾಂಗ್ರೆಸ್ ಮುಖಂಡರಿಗೆ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಸವಾಲು ಹಾಕಿದ್ದಾರೆ. ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ಡಾ.ಜಿ. ಪರಮೇಶ್ವರ್ ಒಬ್ಬರನ್ನೊಬ್ಬರು ಕಾಲೆಳೆಯುತ್ತಿಲ್ಲ ಎಂದು ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಪ್ರಮಾಣ ಮಾಡಲಿ ಎಂದು ಕಾಂಗ್ರೆಸ್ ಮುಖಂಡರಿಗೆ ಈಶ್ವರಪ್ಪ ಸವಾಲು ಹಾಕಿದ್ದಾರೆ.
ಬಾಗಲಕೋಟೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದಲ್ಲಿ ಈಗಲೂ ಗುಂಪುಗಾರಿಕೆ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ. ಸಿದ್ದರಾಮಯ್ಯ, ಡಿಕೆಶಿ, ಎಂ.ಬಿ. ಪಾಟೀಲ್, ಪರಮೇಶ್ವರ್ ಅವರು ತಾವೇ ಮುಖ್ಯಮಂತ್ರಿ ಎಂದು ಹೇಳಿಕೊಳ್ಳುತ್ತಿದ್ದಾರೆ ಎಂದು ಮಾಜಿ ಸಚಿವ ಈಶ್ವರಪ್ಪ ಟೀಕಿಸಿದ್ದಾರೆ.
ಪಕ್ಷ, ಸಂಘಟನೆ ಮತ್ತು ಸಿದ್ಧಾಂತ ಒಪ್ಪಿದವರಿಗೆ ಸ್ಥಾನಮಾನ ನೀಡಲಾಗುವುದು. ಬಿಜೆಪಿಯಲ್ಲಿ ಯಾವ ಸ್ಥಾನಮಾನವನ್ನು ಬೇಕಾದರೂ ಕೊಡುತ್ತೇವೆ. ಇದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಸಾಕ್ಷಿಯಾಗಿದ್ದಾರೆ. ಬಿಜೆಪಿಗೆ ಬಂದ ಕಾರ್ಯಕರ್ತರನ್ನು ತಿರಸ್ಕರಿಸುವುದಿಲ್ಲ. ಆದರೆ, ತಲೆಹರಟೆ ಮಾಡಿದರೆ ಚರಂಡಿಗೆ ಎಸೆಯುತ್ತೇವೆ ಎಂದು ಹೇಳಿದ್ದಾರೆ.
ಇನ್ನು ಪರೋಕ್ಷವಾಗಿ ಉಪಮುಖ್ಯಮಂತ್ರಿ ಆಸೆಯನ್ನು ಈಶ್ವರಪ್ಪ ಹೊರಹಾಕಿದ್ದಾರೆ. ನಾನು ಉಪ ಮುಖ್ಯಮಂತ್ರಿ ಆಗಬೇಕೆಂದು ಸ್ವಾಮೀಜಿಗಳು ಹೇಳುತ್ತಿದ್ದಾರೆ. ಯಡಿಯೂರಪ್ಪನವರ ಜೊತೆ ಸೇರಿ ಪಕ್ಷವನ್ನು ಕಟ್ಟಿದ್ದಾರೆ. ಈಶ್ವರಪ್ಪ ಯಡಿಯೂರಪ್ಪನವರ ನಂತರ ಮುಖ್ಯಮಂತ್ರಿ ಆಗಬೇಕಿತ್ತು. ಈಗ ಡಿಸಿಎಂ ಆದರೂ ಆಗಬೇಕು ಎಂದು ಸ್ವಾಮೀಜಿಗಳು ಹೇಳುತ್ತಿದ್ದಾರೆ ಎಂದು ಈಶ್ವರಪ್ಪ ತಿಳಿಸಿದ್ದಾರೆ.