ಬಾಗಲಕೋಟೆ ಜಿಲ್ಲೆ ತುಂಗಳ ಗ್ರಾಮದಲ್ಲಿ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾವಳಗಿ ಠಾಣೆ ಪೊಲೀಸರು ಮೃತಪಟ್ಟ ಮಹಿಳೆಯ ಪತಿ ಮತ್ತು ಅಪ್ರಾಪ್ತ ಮಗನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಜಮಖಂಡಿ ತಾಲೂಕಿನ ತುಂಗಳ ಗ್ರಾಮದಲ್ಲಿ ಜೂನ್ 7 ರಂದು ಮಹಾದೇವಿ(40) ಅವರನ್ನು ಅನೈತಿಕ ಸಂಬಂಧದ ಶಂಕೆ ಹಿನ್ನೆಲೆಯಲ್ಲಿ ಪತಿಯೇ ಅಪ್ರಾಪ್ತ ಮಗನೊಂದಿಗೆ ಸೇರಿ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಮಹಾದೇವಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಗ್ರಾಮಸ್ಥರಿಗೆ ನಂಬಿಸಿ ತರಾತುರಿಯಲ್ಲಿ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ. ಇದರ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಅನಾಮಿಕನೊಬ್ಬ ಪೊಲೀಸರಿಗೆ ಮಾಹಿತಿ ನೀಡಿದ್ದು, ಆತನ ಕರೆ ಆಧರಿಸಿ ಸಾವಳಗಿ ಠಾಣೆ ಪೊಲೀಸರು, ಜಮಖಂಡಿ ಸಿಬಿಐ ತನಿಖೆ ಕೈಗೊಂಡು ಮೃತ ಮಹಿಳೆಯ ಪತಿ ಹನುಮಂತಪ್ಪ ಮತ್ತು 14 ವರ್ಷದ ಮಗನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ವಿಚಾರ ಬೆಳಕಿಗೆ ಬಂದಿದೆ ಎನ್ನಲಾಗಿದೆ. ಶವದ ಮೂಳೆಯ ಡಿಎನ್ಎ ಟೆಸ್ಟ್ ಮಾಡಿಸಿ ಮೃತದೇಹ ಮಹಾದೇವಿಯವರದೇ ಎಂದು ಪೊಲೀಸರು ದೃಢಪಡಿಸಿಕೊಂಡಿದ್ದು, ವಶಕ್ಕೆ ಪಡೆದವರ ವಿಚಾರಣೆ ನಡೆಸಿದ್ದಾರೆ ಎಂದು ಹೇಳಲಾಗಿದೆ.