ಬಾಗಲಕೋಟೆ: ಅಲ್ಪಸಂಖ್ಯಾತ ಪತ್ತಿನ ಸಹಕಾರಿ ಬ್ಯಾಂಕ್ ನಲ್ಲಿ 10 ಕೋಟಿಗೂ ಅಧಿಕ ಅಕ್ರಮವೆಸಗಿರುವ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ.
ಸಾಲದ ಹೆಸರಲ್ಲಿ 10 ಕೋಟಿಗೂ ಅಧಿಕ ಹಣ ಗೋಲ್ ಮಾಲ್ ಮಾಡಲಾಗಿದ್ದು, ಆಡಳಿತ ಮಂಡಳಿ, ಮ್ಯಾನೇಜರ್, ಸಿಇಒ ಗಳಿಂದಲೇ ಅಕ್ರಮ ನಡೆದಿದೆ. ಸಾಮಾಜಿಕ ಕಾರ್ಯಕರ್ತ ನಾಮದೇವ ಸಾಲಾಪುರ ಎಂಬುವವರು ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ.
ಲೋಕಾಯುಕ್ತ ತನಿಖೆಯಲ್ಲಿಯೂ ಸಹಕಾರಿ ಬ್ಯಾಂಕ್ ಅಕ್ರಮ ಬಯಲಾಗಿದೆ. ಈ ಹಿನ್ನೆಲೆಯಲ್ಲಿ ಆಡಳಿತ ಮಂಡಳಿಗೆ ಲೋಕಾಯುಕ್ತ ನೋಟೀಸ್ ನೀಡಿದೆ. ಸಹಕಾರಿ ಬ್ಯಾಂಕ್ ನ ನಿಯಮ ಉಲ್ಲಂಘನೆ ಮಾಡಿ ಕೋಟಿ ಕೋಟಿ ಹಣವನ್ನು ಸಾಲದ ರೂಪದಲ್ಲಿ ವಿತರಣೆ ಮಾಡಲಾಗಿದೆ.
ಒಂದು ಕುಟುಂಬದ 24 ಜನರು, ಇನ್ನೊಂದು ಕುಟುಂಬದ 15 ಜನರು ಹಾಗೂ ಇನ್ನೊಂದು ಕುಟುಂಬದ 3 ಜನರಿಗೆ ಸಾಲ ನೀಡಲಾಗಿದೆ. ಮೂರು ಕುಟುಂಬಗಳು ಮೂರು ವಿವಿಧ ಸಮೂಹ ರಚಿಸಿಕೊಂಡು ಬರೋಬ್ಬರಿ 10 ಕೋಟಿ 66 ಲಕ್ಷ ಸಾಲ ಪಡೆದಿದ್ದಾರೆ. ಬಡ್ಡಿಯನ್ನು ಮನಬಂದಂತೆ ಫಿಕ್ಸ್ ಮಾಡಲಾಗಿದೆ. ಈ ಮೂಲಕ ಸಹಕಾರಿ ಬ್ಯಾಂಕ್ ನಲ್ಲಿ ಗೋಲ್ ಮಾಲ್ ನಡೆಸಲಾಗಿರುವುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಆಡಳಿತ ಮಂದಳಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿದೆ.