
ಬಾಗಲಕೋಟೆ: ಪಿಯುಸಿ ವಿದ್ಯಾರ್ಥಿನಿಯೊಬ್ಬಳು ಕೆರೆಗೆ ಹಾರಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನಲ್ಲಿ ನಡೆದಿದೆ.
ತೇಜಸ್ವಿನಿ ಮೃತ ವಿದ್ಯಾರ್ಥಿನಿ. ಶಾರಾದಾ ಪಿಯು ಕಾಲೇಜಿನಲ್ಲಿ ಓದುತ್ತಿದ್ದ ವಿದ್ಯಾರ್ಥಿನಿ. ಒಂದು ಮಾಹಿತಿ ಪ್ರಕಾರ ತೇಜಸ್ವಿನಿ ವಿರುದ್ಧ ಪರೀಕ್ಷೆಯಲ್ಲಿ ಕಾಪಿ ಮಾಡಿದ ಆರೋಪ ಕೇಳಿಬಂದಿತ್ತು. ಇದಕ್ಕೆ ವಿದ್ಯಾರ್ಥಿಯ ಪೋಷಕರನ್ನು ಕರೆದು ಶಾಲಾ ಆಡಳಿತ ಮಂಡಳಿ ಬುದ್ಧಿವಾದ ಹೇಳಿದ್ದರು ಎನ್ನಲಾಗಿದೆ. ಮತ್ತೊಂದು ಮಾಹಿತಿ ಪ್ರಕಾರ ವಿದ್ಯಾರ್ಥಿನಿ ತೇಜಸ್ವಿನಿ ಪರೀಕ್ಷೆಗೆ ಸಂಬಂಧಿಸಿದ ಫೈಲ್ ಒಂದನ್ನು ತನ್ನ ಬ್ಯಾಗ್ ನಲ್ಲಿ ಇಟ್ಟುಕೊಳ್ಳುತ್ತಿದ್ದಳು ಎಂದು ಪ್ರಾಂಶುಪಾಲರು ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.
ಒಟ್ಟಾರೆ ವಿದ್ಯಾರ್ಥಿನಿ ತೇಜಸ್ವಿನಿ ಪೋಷಕರನ್ನು ಕಾಲೇಜಿಗೆ ಕರೆಸಿ ಆಡಳಿತ ಮಂಡಳಿಯವರು ಬೈದಿದ್ದಾರೆ. ತನ್ನದೇನೂ ತಪ್ಪಿಲ್ಲ ಎಂದು ವಿದ್ಯಾರ್ಥಿನಿ ಪೋಷಕರ ಮುಂದೆ ಹೇಳಿದ್ದಳು. ಆದಾಗ್ಯೂ ಕಾಲೇಜಿಗೆ ಕರೆಸಿ ಬೈದಿದ್ದಾರೆ. ಇದರಿಂದ ನೊಂದ ವಿದ್ಯಾರ್ಥಿನಿ ನೇರವಾಗಿ ಕಾಲೇಜಿನಿಂದ ಹೊರಬಂದವಳೇ ಕೆರೆಯತ್ತ ಸಾಗಿದ್ದು, ಕೆರೆಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.
ವಿದ್ಯಾರ್ಥಿನಿ ಕೆರೆಯತ್ತ ಸಾಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ.