ಬಾಗಲಕೋಟೆ: ಆಧುನಿಕತೆ ಎಷ್ಟೇ ಮುಂದುವರೆದರೂ ತಂತ್ರಜ್ಞಾನಗಳ ಯುಗದಲ್ಲೇ ಇದ್ದರೂ ಮೂಢನಂಬಿಕೆ, ಮೌಢ್ಯಾಚರಣೆ ಮಾತ್ರ ಇನ್ನೂ ಸಂಪೂರ್ಣವಾಗಿ ನಿಂತಿಲ್ಲ. ಇಲ್ಲೋರ್ವ ದೇವಸ್ಥಾನದ ಪೂಜಾರಿ ಕಷ್ಟ ಹೇಳಿಕೊಂಡು ಬರುವ ಭಕ್ತರಿಗೆ ಅವರ ನೋವು ನಿವಾರಿಸಲು ಕೊಡಲಿಯಿಂದ ಏಟು ಕೊಡುವ ಪದ್ಧತಿ ಬೆಳಕಿಗೆ ಬಂದಿದೆ.
ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಮೆಟಗುಡ್ಡ ಗ್ರಾಮದಲ್ಲಿ ಕಾಶಿಲಿಂಗೇಶ್ವರ ದೇವಸ್ಥಾನದ ಪೂಜಾರಿ ಜಕ್ಕಪ್ಪ ಗಡ್ಡದ ಎಂಬುವವರು ಭಕ್ತರು ಮೈ, ಕೈ ನೋವೆಂದು ಹೇಳಿಕೊಂಡು ಬಂದವರಿಗೆ ಕೊಡಲಿಯಿಂದ ಏಟು ನೀಡಿ ವಾಸಿ ಮಾಡುತ್ತಾರಂತೆ. ಪೂಜಾರಿಯ ಮೌಢ್ಯಾಚರಣೆಗೆ ವ್ಯಕ್ತಿಯೋರ್ವನ ಬೆನ್ನಿಗೆ ಬಲವಾಗಿ ಕೊಡಲಿ ಏಟು ಬಿದ್ದಿದ್ದು, ಪೂಜಾರಿ ವಿರುದ್ಧ ದೂರು ದಾಖಲಾಗಿದೆ.
ಮೈ, ಕೈ ನೋವು ಎಂದು ಸಂಕಷ್ಟ ತೋಡಿಕೊಂಡು ಬರುವ ಭಕ್ತರಿಗೆ ನೋವಿನ ಜಾಗಕ್ಕೆ ಭಂಡಾರ ಎರಚಿ, ಕೊಡಲಿಯಿಂದ ಹೊಡೆಯಲಾಗುತ್ತದೆ. ಹೀಗೆ ಕೊಡಲಿಯಿಂದ ಹೊಡೆದರೆ ಗುಣಮುಖವಾಗುತ್ತದೆ ಎಂಬುದು ಇಲ್ಲಿನ ಭಕ್ತರ ಭಾವನೆಯಂತೆ. ಇದೇ ರೀತಿ ಮೈ ಕೈ, ಹೊಟ್ಟೆ, ಬೆನ್ನು ನೋವೆಂದು ಬಂದ ಭಕ್ತನೊಬ್ಬನನ್ನು ಮಲಗಿಸಿ ಪೂಜಾರಿ ಜಕ್ಕಪ್ಪ, ಆತನ ಬೆನ್ನಿನ ಭಾಗಕ್ಕೆ ಭಂಡಾರ ಎರಚಿ ಕೊಡಲಿಯಿಂದ ಹೊಡೆದಿದ್ದಾನೆ. ಮೊದಲ ಏಟು ಸರಿಯಾಗಿ ನಾಟಿಲ್ಲ ಎಂದು ಮತ್ತೊಮ್ಮೆ ಕೊಡಲಿಯಿಂದ ಜೋರಾಗಿ ಹೊಡೆದಿದ್ದು, ಭಕ್ತನ ಬೆನ್ನಿಗೆ ಕೊಡಲಿಹೊಕ್ಕಿದ್ದು, ಕೊಡಲಿ ತೆಗೆಯಲು ಪೂಜಾರಿ ಹರಸಾಹಸ ಪಟ್ಟಿದ್ದಾನೆ. ಈ ಭಯಾನಕ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಲೋಕಾಪುರ ಠಾಣೆಯಲ್ಲಿ ಪೂಜಾರಿ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೂಜಾರಿ ಜಕ್ಕಪ್ಪನನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.