
ಬಾಗಲಕೋಟೆ: ಬಿಜೆಪಿಯಲ್ಲಿ ನಿಷ್ಠಾವಂತ ಕಾರ್ಯಕರ್ತರಿಗೆ ಬೆಲೆ ಇಲ್ಲ. ದಶಕಗಳಿಂದ ಪಕ್ಷಕ್ಕಾಗಿ ದುಡಿದವರನ್ನು ಅಲ್ಲಿ ಕಡೆಗಣಿಸಲಾಗುತ್ತಿದೆ ಎಂದು ಮಾಜಿ ಡಿಸಿಎಂ, ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ ಕಿಡಿಕಾರಿದ್ದಾರೆ.
ಬಾಗಲಕೋಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಲಕ್ಷ್ಮಣ ಸವದಿ, ಬಿಜೆಪಿ ನಾಯಕರಲ್ಲಿ ಈಗ ತತ್ವ-ಸಿದ್ಧಾಂತಗಳು ಉಳಿದಿಲ್ಲ. ವ್ಯಾಪಾರೀಕರಣ ಹಾಸುಹೊಕ್ಕಾಗಿದೆ. ವಿಧಾನಸಭಾ ಚುನಾವಣೆ ವೇಲೆ ಹಣಕ್ಕಾಗಿ ಟಿಕೆಟ್ ಮಾರಿಕೊಂಡಿರುವ ಸುದ್ದಿ ಎಲ್ಲೆಡೆ ದಟ್ಟವಾಗಿ ಹರಡಿದೆ. ಲೋಕಸಭೆ ಚುನಾವಣೆಯಲ್ಲೂ ಉಮೇದುವಾರರು ಹಣ ಚೆಲ್ಲಿ ಟಿಕೆಟ್ ಪಡೆದಿರುವ ಬಗ್ಗೆ ಆರೋಪ ಕೇಳಿ ಬರುತ್ತಿದೆ ಎಂದರು.
ನಾನು ಯಾಕೆ ಬಿಜೆಪಿ ತೊರೆದೆ ಎಂಬುದು ಜನರಿಗೆ ಈಗ ಅರ್ಥವಾಗಿರಬೇಕು. ರಾಜ್ಯ ಬಿಜೆಪಿಯನ್ನು ಶುದ್ಧೀಕರಿಸುವ ಜವಾಬ್ದಾರಿಯನ್ನು ಕೆ.ಎಸ್.ಈಶ್ವರಪ್ಪ ಹೊತ್ತಿರುವಂತಿದೆ. ಈಶ್ವರಪ್ಪ ಇನ್ನೂ ನಾಮಪತ್ರ ಸಲ್ಲಿಸಿಲ್ಲ, ಸಲ್ಲಿಸುತ್ತಾರೋ ಇಲ್ಲವೋ ಗೊತ್ತಿಲ್ಲ ಎಂದು ಹೇಳಿದರು.