ಬಾಗಲಕೋಟೆ: ಪಟ್ಟಣ ಪಂಚಾಯಿತಿ ಸದಸ್ಯನೊಬ್ಬ ಯುವತಿಗೆ ಪ್ರೀತಿಸಿದ ಯುವಕನೊಂದಿಗೆ ಮದುವೆ ಮಾಡಿಸುವುದಾಗಿ ಹೇಳಿ ಬರೋಬ್ಬರಿ 9 ಲಕ್ಷ ರೂಪಾಯಿ ವಂಚಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ಅಮೀನಗಢ ಪಟ್ಟಣ ಪಂಚಾಯಿತಿ ಸದಸ್ಯ ಸಂಜು ಐಹೊಳೆ ವಿರುದ್ಧ ವಂಚನೆ ಹಾಗೂ ಲೈಂಗಿಕ ಕಿರುಕುಳ ಆರೋಪ ಕೇಳಿಬಂದಿದೆ.
ಪಟ್ಟಣ ಪಂಚಾಯಿತಿ ಸದಸ್ಯ, ವೃತ್ತಿಯಲ್ಲಿ ವಕೀಲ, ಜಯಕರ್ನಾಟಕ ಸಂಘಟನೆಯ ಹುನಗೂರು ತಾಲೂಕು ಅಧ್ಯಕ್ಷರಾಗಿರುವ ಸಂಜು ಐಹೊಳೆ ವಿರುದ್ಧ ಯುವತಿ ಗಂಭೀರ ಆರೋಪ ಮಾಡಿದ್ದಾಳೆ.
ಭಾಗ್ಯಲಕ್ಷ್ಮೀ ಎಂಬ ಯುವತಿಗೆ ಪ್ರಿಯಕರನೊಂದಿಗೆ ಮದುವೆ ಮಾಡಿಸುವುದಾಗಿ ಹೇಳಿ 9 ಲಕ್ಷ ಹಣ ಪಡೆದು ವಂಚಿಸಿದ್ದಾರೆ. ಬೆಳಗಾವಿ ಲಾಡ್ಜ್ ಗೆ ಕರೆದೊಯ್ದು ಲೈಂಗಿಕ ಕಿರುಕುಳ ನೀಡಿದ್ದಾಗಿ ಆರೋಪಿಸಿದ್ದು, ಆದರೆ ಸಂಜು ಐಹೊಳೆ ಇದೊಂದು ಕಟ್ಟು ಕಥೆ, ಸುಳ್ಳು ಆರೋಪ ಎಂದಿದ್ದಾರೆ. ಭಾಗ್ಯಲಕ್ಷ್ಮೀ ಹಾಗೂ ಸಾಗರ್ ಬೆಳಗಾವಿಯಲ್ಲಿ ಇಂಜಿನಿಯರಿಂಗ್ ಓದುತ್ತಿದ್ದ ವೇಳೆ ಪರಸ್ಪರ ಪ್ರೀತಿಸಿದ್ದರು.
ಸಾಗರ್ ಎಂಬಾತ ಯುವತಿಯನ್ನು ಪ್ರೀತಿಸಿ ಈಗ ಮದುವೆಯಾಗಲು ಒಪ್ಪುತ್ತಿಲ್ಲ ಎಂದು ಯುವತಿ ಕುಟುಂಬದವರು ನನ್ನ ಬಳಿ ಬಂದಿದ್ದರು. ನಾನೇ ನಮ್ಮ ಸಂಘಟನೆಯಿಂದ ಇಬ್ಬರ ಮದುವೆ ಮಾಡಿಸಿದ್ದೆ. ಆದರೆ ಸಾಗರ್ ಆಕೆಯನ್ನು ತನ್ನ ಮನೆಗೆ ಕರೆದೊಯ್ದಿಲ್ಲ. ಆಕೆಗೆ 5 ಲಕ್ಷ ಕೊಡುತ್ತೇನೆ. ಅವಳು ಅವಳ ಪಾಡಿಗೆ ಇರಲಿ ಎಂದಿದ್ದ. ನಾವೇ ಮುಂದೆ ನಿಂತು ಹಣವನ್ನೂ ಕೊಡಿಸಿದ್ದೇವೆ. ಈಗ ನನ್ನ ವಿರುದ್ಧವೇ ಆರೋಪ ಮಾಡುತ್ತಿದ್ದಾರೆ. ಇದೆಲ್ಲವೂ ಸುಳ್ಳು ಮಾನನಷ್ಟ ಕೊಕದ್ದಮೆ ಹೂಡುತ್ತೇನೆ ಎಂದು ಎಚ್ಚರಿಸಿದ್ದಾರೆ.