ಡೆಹ್ರಾಡೂನ್: ಉತ್ತರಾಖಂಡದ ಚಾರ್ ಧಾಮ್ ದೇವಾಲಯದ ಆವರಣದಲ್ಲಿ ಯಾವುದೇ ರೀತಿಯ ಅಪಘಾತ ಸಂಭವಿಸಿದಲ್ಲಿ ಭಕ್ತರಿಗೆ ಒಂದು ಲಕ್ಷ ರೂಪಾಯಿಗಳ ವಿಮೆ ಒದಗಿಸಲಾಗುವುದು ಎಂದು ಬದರಿನಾಥ್-ಕೇದಾರನಾಥ ದೇವಾಲಯ ಸಮಿತಿ (BKTC) ಘೋಷಿಸಿದೆ.
ಚಾರ್ ಧಾಮ್ ಯಾತ್ರೆಯು ಮೇ 3, 2022 ರಂದು ಪುನರಾರಂಭವಾಗಿದ್ದು, ಈ ವರ್ಷ ಯಾತ್ರೆ ಪುನರಾರಂಭಗೊಂಡಾಗಿನಿಂದ 100 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.
ಈ ವರ್ಷ ಚಾರ್ ಧಾಮ್ ಯಾತ್ರೆಗೆ ಅಪಾರ ಭಕ್ತರ ದಂಡು ಹರಿದು ಬರುತ್ತಿದೆ. ಕೇದಾರನಾಥ ದೇವಾಲಯದ ಆವರಣದಲ್ಲಿ ಭದ್ರತೆ ಮತ್ತು ಜನಸಂದಣಿ ನಿರ್ವಹಣೆಗಾಗಿ ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ITBP) ಅನ್ನು ನಿಯೋಜಿಸಲಾಗಿದೆ.
ಮಾಹಿತಿಯ ಪ್ರಕಾರ, 2019 ರಲ್ಲಿ 90 ಚಾರ್ ಧಾಮ್ ಭಕ್ತರು, 2018 ರಲ್ಲಿ 102 ಮತ್ತು 2017 ರಲ್ಲಿ 112 ಮಂದಿ ಸಾವನ್ನಪ್ಪಿದ್ದಾರೆ.
ಮೇ 6 ರಂದು ಕೇದಾರನಾಥ ದೇವಾಲಯವನ್ನು ತೆರೆಯಲಾಗಿದ್ದು, ಈಗಾಗಲೇ 1.30 ಲಕ್ಷ ಯಾತ್ರಾರ್ಥಿಗಳು ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ 2 ವರ್ಷಗಳ ಅಂತರದ ನಂತರ ಚಾರ್ ಧಾಮ್ ಯಾತ್ರೆ ಪುನರಾರಂಭವಾಗಿದ್ದು, ಯಮುನೋತ್ರಿ, ಗಂಗೋತ್ರಿ, ಕೇದಾರನಾಥ ಮತ್ತು ಬದರಿನಾಥದಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗಿದೆ.