ಮಹಾರಾಷ್ಟ್ರ ಬದ್ಲಾಪುರದ ಥಾಣೆ ಶಾಲೆಯಲ್ಲಿ ನಡೆದ ಲೈಂಗಿಕ ಶೋಷಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಾಯಿ ಹೇಳಿಕೆ ನೀಡಿದ್ದಾಳೆ. ಅತ್ಯಾಚಾರ ಪ್ರಕರಣದಲ್ಲಿ ತನ್ನ ಮಗ ತಪ್ಪಿತಸ್ಥನೆಂದು ಸಾಬೀತಾದರೆ ಮರಣದಂಡನೆ ವಿಧಿಸಬೇಕು ಎಂದು ಆರೋಪಿಯ ತಾಯಿ ಆಗ್ರಹಿಸಿದ್ದಾಳೆ. ತನಿಖೆಗಾಗಿ ಪೊಲೀಸರು ಮತ್ತು ಎಸ್‌ಐಟಿ ಅವರ ಮನೆಗೆ ಹೋದಾಗ, ಆರೋಪಿಯ ತಾಯಿ ತನ್ನ ಮಗ ತಪ್ಪಿತಸ್ಥನಾಗಿದ್ದರೆ ಮರಣದಂಡನೆ ವಿಧಿಸಿ ಎಂದಿದ್ದಾರೆ.
ಆರೋಪಿಯು ತನ್ನ ಕುಟುಂಬದೊಂದಿಗೆ ಬದ್ಲಾಪುರದ ಖಾರ್ವಾಯಿ ಗ್ರಾಮದಲ್ಲಿ ವಾಸಿಸುತ್ತಿದ್ದ. ಆರೋಪಿ ಕಳೆದ ಎರಡು ವರ್ಷಗಳಲ್ಲಿ ಮೂರು ಮದುವೆಯಾಗಿದ್ದಾನೆ. ಈತ ಇಬ್ಬರು ಪತ್ನಿಯರನ್ನು ಅಗಲಿದ್ದು, ಮೂರನೇ ಪತ್ನಿ 5 ತಿಂಗಳ ಗರ್ಭಿಣಿ. ಅವನ ತಾಯಿ ಶಾಲೆಯಲ್ಲಿ ಕ್ಲೀನಿಂಗ್ ಕೆಲಸ ಮಾಡುತ್ತಾರೆ. ಅವರ ಕಿರಿಯ ಸಹೋದರ ಶಾಲೆಯಲ್ಲಿ ಪ್ಯೂನ್. ಆರೋಪಿಯು ಶಾಲೆಯಲ್ಲಿ ಸ್ವೀಪರ್ ಆಗಿ ಕೆಲಸ ಮಾಡುವ ಮೊದಲು ತನ್ನ ತಾಯಿಯೊಂದಿಗೆ ಹೌಸಿಂಗ್ ಸೊಸೈಟಿಯಲ್ಲಿ ಸ್ವೀಪರ್ ಆಗಿ ಕೆಲಸ ಮಾಡುತ್ತಿದ್ದ.
ಈತನ ಮೇಲೆ ಶಾಲೆಯಲ್ಲಿ ಇಬ್ಬರು ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪವಿದೆ. ಆಗಸ್ಟ್ 20 ರಂದು ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಬದ್ಲಾಪುರ್‌ನಲ್ಲಿ ಘಟನೆ ನಡೆದಿತ್ತು. ಇಬ್ಬರು ಬಾಲಕಿಯರಿಗೆ ಈತ ಕಿರುಕುಳ ನೀಡಿದ್ದ. ಬಾಲಕಿಯರ ಸ್ಥಿತಿ ನೋಡಿ ಪೋಷಕರಿಗೆ ಅನುಮಾನ ಬಂದಿದ್ದು, ಮನವೊಲಿಸಿ ವಿಚಾರಿಸಿದ್ದಾರೆ. ಆರೋಪಿ ಕೃತ್ಯದ ಬಗ್ಗೆ ಬಾಲಕಿಯರು ತಿಳಿಸಿದಾಗ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ವೈದ್ಯಕೀಯ ವರದಿ ಬಂದ ಬಳಿಕ ಪೊಲೀಸರಿಗೆ ಲಿಖಿತ ದೂರು ನೀಡಿದರೂ ಪೊಲೀಸರು ಆರೋಪಿಗಳ ವಿರುದ್ಧ ಕ್ರಮ ಕೈಗೊಂಡಿರಲಿಲ್ಲ. ಪೊಲೀಸರ ವರ್ತನೆ ಖಂಡಿಸಿ ಜನರು ರೈಲು ನಿಲ್ದಾಣಕ್ಕೆ ನುಗ್ಗಿ ಧ್ವಂಸ ಮಾಡಿದ್ದರು. ಸ್ಥಳೀಯ ರೈಲು ಸೇವೆ ಸ್ಥಗಿತಗೊಂಡಿತ್ತು. ಸಿಟ್ಟಿಗೆದ್ದ ಜನರ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದರು. ತ್ವರಿತ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆಗೆ ಆದೇಶ ನೀಡಲಾಗಿದೆ. ಬದ್ಲಾಪುರ ಪೊಲೀಸ್ ಠಾಣೆಯ ಲೇಡಿ ಪೊಲೀಸ್ ಇನ್ಸ್‌ಪೆಕ್ಟರ್, 3 ಪೊಲೀಸ್ ಸಿಬ್ಬಂದಿ ಅಮಾನತುಗೊಂಡಿದ್ದಾರೆ.