
ಹೋಳಿ ಆಟ ಆಡಿ ಬಣ್ಣ ತೊಳೆದುಕೊಳ್ಳಲು ನದಿಗೆ ಇಳಿದ ನಾಲ್ವರು ಬಾಲಕರು ಮುಳುಗಿ ಸಾವನ್ನಪ್ಪಿದ್ದಾರೆ. ಈ ದುರಂತ ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಬದ್ಲಾಪುರದಲ್ಲಿ ನಡೆದಿದೆ.
ಪೊದ್ದಾರ್ ಹೌಸಿಂಗ್ ಸೊಸೈಟಿಯ ಎಂಟು ಬಾಲಕರು ಹೋಳಿ ಆಟ ಆಡಿ ಮಧ್ಯಾಹ್ನ ಸುಮಾರು 2.30 ರ ಸುಮಾರಿಗೆ ಉಲ್ಹಾಸ್ ನದಿಗೆ ಬಣ್ಣ ತೊಳೆದುಕೊಳ್ಳಲು ಹೋಗಿದ್ದರು. ಈ ವೇಳೆ ಒಬ್ಬ ಬಾಲಕ ಮುಳುಗಲು ಶುರು ಮಾಡಿದ್ದಾನೆ. ಆತನನ್ನು ರಕ್ಷಿಸಲು ಹೋದ ಮೂವರು ಬಾಲಕರು ಸಹ ಮುಳುಗಿ ಸಾವನ್ನಪ್ಪಿದ್ದಾರೆ.
ಮೃತಪಟ್ಟ ಬಾಲಕರನ್ನು ಆರ್ಯನ್ ಮೇದಾರ್ (15), ಸಿದ್ಧಾರ್ಥ್ ಸಿಂಗ್ (16), ಆರ್ಯನ್ ಸಿಂಗ್ (15), ಓಂಸಿಂಗ್ ತೋಮರ್ (15) ಎಂದು ಗುರುತಿಸಲಾಗಿದೆ.
ಉಳಿದ ನಾಲ್ವರು ಬಾಲಕರು ಸ್ಥಳೀಯರಿಗೆ, ಪೊಲೀಸರಿಗೆ ಮತ್ತು ತಮ್ಮ ಪೋಷಕರಿಗೆ ಮಾಹಿತಿ ನೀಡಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ರಕ್ಷಣಾ ತಂಡಗಳು ಸ್ಥಳಕ್ಕೆ ಬಂದು ಎರಡು ಗಂಟೆಗಳ ಒಳಗೆ ಶವಗಳನ್ನು ಹೊರತೆಗೆದಿದ್ದಾರೆ. ಮೃತ ದೇಹಗಳನ್ನು ಬದ್ಲಾಪುರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕೊಂಡೊಯ್ಯಲಾಗಿದೆ.
ಬದ್ಲಾಪುರ ಅಗ್ನಿಶಾಮಕ ಠಾಣೆ ಅಧಿಕಾರಿಗಳು ತುರ್ತು ಕರೆ ಬಂದ ತಕ್ಷಣ ಏಳು ಜನರ ತಂಡವನ್ನು ಒಂದು ಅಗ್ನಿಶಾಮಕ ವಾಹನದೊಂದಿಗೆ ಕಳುಹಿಸಿದ್ದಾಗಿ ತಿಳಿಸಿದ್ದಾರೆ.
ಬದ್ಲಾಪುರ ಕಲ್ಯಾಣ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ಗೋವಿಂದ ಪಾಟೀಲ್, “ನಮ್ಮ ಗಸ್ತು ತಂಡಕ್ಕೆ ಬಾಲಕರು ಮಾಹಿತಿ ನೀಡಿದರು, ನಾವು ತಕ್ಷಣ ಸ್ಥಳೀಯ ಸಹಾಯಕ್ಕಾಗಿ ಕರೆ ಮಾಡಿದೆವು. ಸ್ಥಳೀಯರು ಒಂದು ಶವವನ್ನು ಹೊರತೆಗೆದರು, ಅಗ್ನಿಶಾಮಕ ದಳ ಎರಡು ಗಂಟೆಗಳ ರಕ್ಷಣಾ ಕಾರ್ಯಾಚರಣೆ ನಡೆಸಿ 4.30ರ ವೇಳೆಗೆ ಮೂರು ಶವಗಳನ್ನು ಹೊರತೆಗೆದರು. ನಾವು ಆರಂಭದಲ್ಲಿ ಆಕಸ್ಮಿಕ ಸಾವು ವರದಿಯನ್ನು (ADR) ದಾಖಲಿಸಿದ್ದೇವೆ” ಎಂದು ಹೇಳಿದ್ದಾರೆ.
Maharashtra | Four children drowned in Ulhas River in Thane after they went there to wash off their Holi colours. The names of these children are Aryan Medar, Aryan Singh, Siddharth Singh and Om Singh Tomar. The bodies have been recovered by the Badlapur fire brigade: Thane…
— ANI (@ANI) March 14, 2025