ಬೆಂಗಳೂರು : ಹಿಂದುಳಿದ ವರ್ಗಕ್ಕೆ ಸೇರಿದ ಸಿದ್ದರಾಮಯ್ಯ ಎರಡನೇ ಬಾರಿ ಮುಖ್ಯಮಂತ್ರಿಯಾಗಿದ್ದು ಬಹಳಾ ಜನರಿಗೆ ಹೊಟ್ಟೆಯುರಿ ಉಂಟುಮಾಡಿದೆ. ಅದಕ್ಕಾಗಿ ಕುತಂತ್ರ ಮಾಡುತ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ಹಿಂದುಳಿದ ವರ್ಗಕ್ಕೆ ಸೇರಿದ ಸಿದ್ದರಾಮಯ್ಯ ಎರಡನೇ ಬಾರಿ ಮುಖ್ಯಮಂತ್ರಿಯಾಗಿದ್ದು ಬಹಳಾ ಜನರಿಗೆ ಹೊಟ್ಟೆಯುರಿ ಉಂಟುಮಾಡಿದೆ.ನನ್ನ 4 ದಶಕಗಳ ರಾಜಕೀಯ ಜೀವನದಲ್ಲಿ ಇಂಥಾ ಬಹಳಷ್ಟು ಪಿತೂರಿ, ಷಡ್ಯಂತ್ರ ನೋಡಿ, ಎದುರಿಸಿ ಬಂದಿದ್ದೀನಿ. ಇದಕ್ಕೆಲ್ಲಾ ನಾನು ಹೆದರುವುದಿಲ್ಲ’ ಎಂದರು.
‘ಮೂಡಾ ಮೊದಲಿನಿಂದಲೂ ಗಬ್ಬೆದ್ದು ಹೋಗಿದ್ದು, ಅದನ್ನು ಸ್ವಚ್ಛ ಮಾಡಬೇಕಿದೆ. ನಮಗೆ ನಿವೇಶನ ಕೊಟ್ಟಿದ್ದು ಹಗರಣವಲ್ಲ. ನಮ್ಮ ಜಮೀನನ್ನು ಮುಡಾದವರು ಅಕ್ರಮವಾಗಿ ಕಬಳಿಕೆ ಮಾಡಿದ್ದಾರೆ. ಬೇರೆಯವರ ಹಾಗೆ ನಾವೇ ಮುಡಾಗೆ ಜಮೀನು ಬಿಟ್ಟುಕೊಟ್ಟು ಪರಿಹಾರ ಕೇಳುತ್ತಿರೋದಲ್ಲ. ಈ ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳಬೇಕು. 2020ನೇ ಇಸವಿಯಲ್ಲಿ ಮೂಡಾ ಅಲ್ಲದೇ ಬೇರೆ ಅಭಿವೃದ್ಧಿ ಪ್ರಾಧಿಕಾರಗಳಲ್ಲಿಯೂ 50:50 ಅನುಪಾತ ಜಾರಿಗೆ ಬಂದಿದೆ. ಇದರಿಂದ ಅಭಿವೃದ್ಧಿ ಪ್ರಾಧಿಕಾರಗಳಿಗೆ ಲಾಭವಾಗುತ್ತದೆಯೇ ಹೊರತು ನಷ್ಟವಾಗುವುದಿಲ್ಲ. ಭೂಮಾಲೀಕರಿಗೆ ನಷ್ಟವುಂಟಾಗಬಾರದು ಎಂದು ತನಿಖೆ ನಡೆಸಲಾಗುತ್ತಿದೆ. ಮೂಡಾ ಆಯುಕ್ತರು, ಮತ್ತಿತರರು ಇದನ್ನು ದುರುಪಯೋಗಪಡಿಸಿಕೊಳ್ಳುತ್ತಾರೆ. ಈ ದುರುಪಯೋಗ ತಡೆಯಲು ತನಿಖೆ ನಡೆಸಿ ಸರಿಮಾಡುತ್ತೇವೆ’ ಎಂದರು.