ಕರ್ನಾಟಕ ರಾಜ್ಯ ಅತಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಮೀಸಲಾತಿಗೆ ಸಂಬಂಧಿಸಿದಂತೆ ಇಂದು ರಾಜ್ಯಪಾಲರಿಗೆ ಮನವಿ ಸಲ್ಲಿಸಿದೆ. ಕರ್ನಾಟಕದ ಸ್ಥಳೀಯ ಸಂಸ್ಥೆಗಳ ಮೀಸಲಾತಿಯಲ್ಲಿ ಅತೀ ಹಿಂದುಳಿದ ವರ್ಗಗಳಿಗೆ ಅನ್ಯಾಯ ಆಗುತ್ತಿದೆ. ಸುಪ್ರೀಂಕೋರ್ಟ್ ಈ ಬಗ್ಗೆ ನಿರ್ದೇಶಿಸಿದ್ದು, ಈ ಸಂಬಂದ ರಾಜ್ಯ ಸರ್ಕಾರಕ್ಕೆ ಸಲಹೆ ಕೊಡುವಂತೆ ರಾಜ್ಯಪಾಲರಿಗೆ ಜಾಗೃತಿ ವೇದಿಕೆ ಮನವಿ ಸಲ್ಲಿಸಿತು. ಕರ್ನಾಟಕ ರಾಜ್ಯ ಅತಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯ ಅಧ್ಯಕ್ಷ ಹಾಗೂ ಮಾಜಿ ವಿಧಾನ ಪರಿಷತ್ ಸದಸ್ಯರಾದ ಎಮ್. ಸಿ. ವೇಣುಗೋಪಾಲ್ ನೇತೃತ್ವದ ನಿಯೋಗ, ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.
ರಾಜ್ಯಪಾಲರ ಭೇಟಿಯ ನಂತರ ಮಾತನಾಡಿದ ಕರ್ನಾಟಕ ರಾಜ್ಯ ಅತಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯ ಅಧ್ಯಕ್ಷ ಎಮ್. ಸಿ. ವೇಣುಗೋಪಾಲ್, ಅತೀ ಹಿಂದುಳಿದ ವರ್ಗಗಳಿಗೆ ಮೀಸಲಾತಿಯಲ್ಲಿ ಆಗಿರುವ ಅನ್ಯಾಯ ಸರಿಪಡಿಸಲು ಸರ್ಕಾರಕ್ಕೆ ನಿರ್ದೇಶಿಸಿಬೇಕೆಂದು ರಾಜ್ಯಪಾಲರಿಗೆ ಮನವಿ ಮಾಡಿದ್ದೇವೆ. ಅಲ್ಲದೆ ಮೀಸಲಾತಿ ನಿಗದಿ ಮಾಡುವ ಸಂಬಂಧ ಹೈಕೋರ್ಟ್ ನ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಆಯೋಗ ರಚಿಸಲು ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿಕೊಂಡಿದ್ದೇವೆ ಎಂದರು.
ಈ ವೇಳೆ ಕರ್ನಾಟಕ ಅತಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯ ಕಾರ್ಯದರ್ಶಿ ನಾಗರಾಜ್, ಖಜಾಂಚಿ ಮಂಜುನಾಥ್, ನೆ.ಲ.ನರೇಂದ್ರ ಬಾಬು, ಪದಾಧಿಕಾರಿಗಳಾದ ಮೋಹನ್ ಬಾಬು, ನರಸಿಂಹ ಮೂರ್ತಿ, ಚಂದ್ರ ಶೇಖರ್ ಬಾಬು ಹಾಗೂ ನಿವೃತ ಐಎಎಸ್ ಅಧಿಕಾರಿಗಳಾದ ಕೆ.ಎಸ್. ಪ್ರಭಾಕರ್, ನಿರಂಜನ್ ಉಪಸ್ಥಿತರಿದ್ದರು.