ಬೆಂಗಳೂರು: ರಾಜ್ಯ ಸರ್ಕಾರ ಸಿಹಿಸುದ್ದಿ ನೀಡಿದೆ. ಬ್ಯಾಕ್ ಲಾಗ್ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ. ಈ ಮೂಲಕ ಸರ್ಕಾರದ ವಿವಿಧ ಇಲಾಖೆ, ಸಂಸ್ಥೆ, ನಿಗಮ/ ಮಂಡಳಿಗಳಲ್ಲಿನ ಬ್ಯಾಕ್ ಲಾಗ್ ಹುದ್ದೆಗಳ ನೇಮಕಾತಿಗೆ ಚಾಲನೆ ದೊರೆತಿದೆ.
ಈ ಹುದ್ದೆಗಳನ್ನು ಭರ್ತಿ ಮಾಡಲು ನೇಮಕಾತಿಗೆ ಅಧಿಸೂಚನೆ ಹೊರಡಿಸಬೇಕೆಂದು ಸಕ್ಷಮ ಪ್ರಾಧಿಕಾರಗಳಿಗೆ ನಿರ್ದೇಶನ ನೀಡಲಾಗಿದೆ. ಈ ಕುರಿತು ಸಮಾಜ ಕಲ್ಯಾಣ ಇಲಾಖೆ ಆಯುಕ್ತರ ಕಚೇರಿಯ ಆದೇಶ ನೀಡಿದೆ.
ಸರ್ಕಾರದ ವಿವಿಧ ಇಲಾಖೆಗಳು / ನಿಗಮಗಳು / ಮಂಡಳಿಗಳು / ವಿಶ್ವವಿದ್ಯಾಲಯಗಳು / ಸಹಕಾರ ಸಂಸ್ಥೆಗಳು / ಅನುದಾನಿತ ಶೈಕ್ಷಣಿಕ ಸಂಸ್ಥೆಗಳಲ್ಲಿ ಖಾಲಿ ಇರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಬ್ಯಾಕ್ ಲಾಗ್ ಹುದ್ದೆಗಳನ್ನು ಭರ್ತಿ ಮಾಡಲು ನೇಮಕಾತಿ ಪ್ರಾಧಿಕಾರಗಳಿಂದಲೇ ಅಧಿಸೂಚನೆ / ಪ್ರಕಟಣೆಯನ್ನು ಹೊರಡಿಸಬೇಕಿರುತ್ತದೆ. ಈ ಸಂಬಂಧವಾಗಿ, ಮಾನ್ಯ ಸಚಿವ ಸಂಪುಟದ ಉಪ ಸಮಿತಿ ಸಭೆಗಳಲ್ಲಿ, ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿ ಸಭೆಗಳಲ್ಲಿ ಮಾನ್ಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ಸಮಾಜ ಕಲ್ಯಾಣ ಇಲಾಖೆ, ಬೆಂಗಳೂರುರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಗಳಲ್ಲಿ ಹಾಗೂ ಆಯುಕ್ತರು, ಸಮಾಜ ಕಲ್ಯಾಣ ಇಲಾಖೆ, ಬೆಂಗಳೂರು ರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಗಳಲ್ಲಿ ಕೈಗೊಂಡ ತೀರ್ಮಾನದಂತೆ ಸರ್ಕಾರದ ವಿವಿಧ ಇಲಾಖೆಗಳು / ನಿಗಮಗಳು / ಮಂಡಳಿಗಳು / ವಿಶ್ವವಿದ್ಯಾಲಯಗಳು / ಸಹಕಾರ ಸಂಸ್ಥೆಗಳು / ಅನುದಾನಿತ ಶೈಕ್ಷಣಿಕ ಸಂಸ್ಥೆಗಳಲ್ಲಿ ಖಾಲಿ ಇರುವ ಬ್ಯಾಕ್‌ಲಾಗ್ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡುವಂತೆ ಸಂಬಂಧಪಟ್ಟ ಸಕ್ಷಮ ಪ್ರಾಧಿಕಾರಗಳಿಗೆ ನಿರ್ದೇಶನ ನೀಡಲಾಗಿರುತ್ತದೆ ಎಂದು ಸಮಾಜ ಕಲ್ಯಾಣ ಇಲಾಖೆ ಅಧಿಕೃತ ಆದೇಶದಲ್ಲಿ ತಿಳಿಸಿದೆ.
ಸರ್ಕಾರದ ಆರ್ಥಿಕ ಇಲಾಖೆ ಈಗಾಗಲೇ ಅನುಮತಿ ನೀಡಿದೆ. ಈಗ ನೇಮಕ ಪ್ರಾಧಿಕಾರಗಳು ವಿವಿಧ ಇಲಾಖೆಗಳು / ನಿಗಮಗಳು / ಮಂಡಳಿಗಳು / ವಿಶ್ವವಿದ್ಯಾಲಯಗಳು / ಸಹಕಾರ ಸಂಸ್ಥೆಗಳು / ಅನುದಾನಿತ ಶೈಕ್ಷಣಿಕ ಸಂಸ್ಥೆಗಳು ನೀಡುವ ನಿಯಮಗಳ ಪ್ರಕಾರದ ಪ್ರಸ್ತಾವನೆಗಳನ್ನು ಪರಿಗಣಿಸಿ ಜೂನ್ ಅಥವಾ ಜುಲೈ ತಿಂಗಳಲ್ಲಿ ಬ್ಯಾಕ್ ಲಾಗ್ ಹುದ್ದೆಗಳ ಭರ್ತಿಗೆ ಅಧಿಸೂಚನೆ ಬಿಡಿಗಡೆಯಾಗುವ ನಿರೀಕ್ಷೆ ಇದೆ.