ಈ ಬಾರಿ 7 ಹಂತದಲ್ಲಿ ನಡೆಯುತ್ತಿರುವ ಲೋಕಸಭಾ ಚುನಾವಣೆಗೆ ಕೇವಲ ಒಂದು ಹಂತದ ಮತದಾನ ಮಾತ್ರ ಬಾಕಿ ಉಳಿದಿದೆ. ಜೂನ್ 4 ರಂದು ಫಲಿತಾಂಶ ಹೊರಬೀಳಲಿದ್ದು, NDA ಮತ್ತು I.N.D.I.A ಮೈತ್ರಿಕೂಟದ ನಾಯಕರು ಕಾತರದಿಂದ ಇದರ ನಿರೀಕ್ಷೆಯಲ್ಲಿದ್ದಾರೆ.
ಇದರ ಮಧ್ಯೆ ಜೂನ್ 1 ರಂದು ನವದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ನೇತೃತ್ವದಲ್ಲಿ I.N.D.I.A ಮೈತ್ರಿ ಕೂಟ ನಾಯಕರ ಸಭೆ ಕರೆದಿದ್ದು, ಆದರೆ ಈ ಸಭೆಗೆ ಮೈತ್ರಿಕೂಟದ ಭಾಗವಾಗಿರುವ ತೃಣ ಮೂಲ ಕಾಂಗ್ರೆಸ್ ಪಕ್ಷದ ನಾಯಕಿ ಹಾಗೂ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗೈರು ಹಾಜರಾಗಲಿದ್ದಾರೆ ಎಂದು ತಿಳಿದುಬಂದಿದೆ.
ಪ್ರಸ್ತುತ ವಾಯುಭಾರ ಕುಸಿತದಿಂದ ಬಂಗಾಳ ಕೊಲ್ಲಿಯಲ್ಲಿ ರೆಮೆಲ್ ಚಂಡಮಾರುತ ಬೀಸುತ್ತಿದ್ದು, ಪಶ್ಚಿಮ ಬಂಗಾಳದ ಕರಾವಳಿ ಪ್ರದೇಶದ ಜನರು ತತ್ತರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪರಿಹಾರ ಕಾರ್ಯ ಕೈಗೊಳ್ಳಬೇಕಿರುವುದು ಹಾಗೂ ಆ ಸಂದರ್ಭದಲ್ಲಿ ಚುನಾವಣೆ ಇರುವ ಕಾರಣ ತಾವು ಜೂನ್ ಒಂದರ I.N.D.I.A ಮೈತ್ರಿಕೂಟದ ಸಭೆಯಲ್ಲಿ ಭಾಗವಹಿಸುತ್ತಿಲ್ಲ ಎಂದು ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ.