ಬೆಂಗಳೂರು : ಟ್ರೇಲರ್ ನಿಂದ ಸಿನಿಪ್ರಿಯರ ಗಮನ ಸೆಳೆಯುತ್ತಿರುವ ಬಹು ನಿರೀಕ್ಷಿತ ಸಿನಿಮಾ
‘ಹಾಸ್ಟೆಲ್ ಹುಡುಗರು’ ಚಿತ್ರಕ್ಕೆ ಕೊನೆಗೂ ಗೆಲುವು ಸಿಕ್ಕಿದ್ದು, ನಾಳೆ ಸಿನಿಮಾ ಬಿಡುಗಡೆಯಾಗಲಿದೆ.
ಚಿತ್ರದಲ್ಲಿ ನನ್ನ ದೃಶ್ಯವನ್ನು ಅನುಮತಿ ಇಲ್ಲದೇ ಬಳಸಲಾಗಿದೆ ಎಂದು ಹಾಸ್ಟೆಲ್ ಹುಡುಗರಿಗೆ ನಟಿ ರಮ್ಯಾ ನೋಟಿಸ್ ನೀಡಿದ್ದರು. ಅಲ್ಲದೇ ಚಿತ್ರಪ್ರದರ್ಶನಕ್ಕೆ ತಡೆ ನೀಡಬೇಕು ಎಂದು ನಟಿ ರಮ್ಯಾ ಕಮರ್ಷಿಯಲ್ ಕೋರ್ಟ್ ಮೆಟ್ಟಿಲೇರಿದ್ದರು. ಸದ್ಯ, ಕೋರ್ಟ್ ಈ ಅರ್ಜಿಯನ್ನು ವಜಾಗೊಳಿಸಿದೆ. ಈ ಮೂಲಕ ಹಾಸ್ಟೆಲ್ ಹುಡುಗರು ಚಿತ್ರತಂಡಕ್ಕಿದ್ದ ಸಂಕಷ್ಟ ನಿವಾರಣೆಯಾಗಿದೆ. ಹಾಸ್ಟೆಲ್ ಹುಡುಗರು ಚಿತ್ರ ತಂಡದ ಪರವಾಗಿ ವಕೀಲ ವೇಲನ್ ವಾದ ಮಂಡಿಸಿದರು.
ಈ ದೃಶ್ಯಗಳನ್ನು ತಮ್ಮ ಅನುಮತಿ ಇಲ್ಲದೇ ಬಳಸಲಾಗಿದೆ, ಎಲ್ಲ ಕಡೆಗಳಿಂದ ತಮ್ಮ ದೃಶ್ಯ, ಫೋಟೋ, ಮತ್ತಿತ್ತರ ಕಂಟೆಂಟ್ಗಳನ್ನು ತೆಗೆದುಹಾಕಬೇಕು ಎಂದು ನಟಿ ಡಿಮ್ಯಾಂಡ್ ಮಾಡಿದ್ದರು. ಅಲ್ಲದೇ 1 ಕೋಟಿ ರೂಪಾಯಿ ಪರಿಹಾರ ನೀಡಬೇಕು ಎಂದು ಕೂಡ ಅವರು ನೋಟೀಸ್ ನಲ್ಲಿ ಒತ್ತಾಯಿಸಿದ್ದರು. ನನ್ನ ಪರ್ಮಿಷನ್ ಇಲ್ಲದೇ ನನ್ನ ಯಾವ ದೃಶ್ಯಗಳನ್ನು ಬಳಸಬಾರದು, ಇದರಿಂದ ತಮಗೆ ಆಗಿರುವ ನಷ್ಟವನ್ನು ತುಂಬಿಕೊಡಬೇಕು ಎಂದು ಕಮರ್ಷಿಯಲ್ ಕೋರ್ಟ್ ಮೂಲಕ ನಟಿ ರಮ್ಯಾ ನೋಟಿಸ್ ನೀಡಿದ್ದರು.
ಅದೇನೆ ಇರಲಿ ಸ್ಯಾಂಡಲ್ ವುಡ್ ನಲ್ಲಿ ಹೊಸ ಪ್ರತಿಭೆಗಳ ಹಾಸ್ಟೆಲ್ ಹುಡುಗರು’ ಸಿನಿಮಾದ ಟ್ರೇಲರ್ ಯೂಟ್ಯೂಬ್ ನಲ್ಲಿ ಧೂಳೆಬ್ಬಿಸುತ್ತಿದ್ದು, ಚಿತ್ರದ ಬಗ್ಗೆ ಸಿಕ್ಕಾಪಟ್ಟೆ ನಿರೀಕ್ಷೆ ಮೂಡಿಸಿದೆ. ಹೊಸ ಪ್ರತಿಭೆಗಳಿಗೆ ನಟ ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ ಸಾಥ್ ನೀಡಿದ್ದಾರೆ. ಚಿತ್ರದ ಟ್ರೇಲರ್ ನೋಡಿದ ಅಭಿಮಾನಿಗಳು ತಮ್ಮ ಕಾಲೇಜು ದಿನವನ್ನು ಮತ್ತೆ ಮೆಲುಕು ಹಾಕಿದ್ದಾರೆ. ಟೀಚರ್ ಪಾತ್ರದಲ್ಲಿ ನಟಿ ರಮ್ಯಾ ಕಾಣಿಸಿಕೊಂಡಿದ್ದು, ಚಿತ್ರಕ್ಕೆ ಪ್ಲಸ್ ಪಾಯಿಂಟ್ ಆಗಿದೆ. ರಮ್ಯಾ ಇಲ್ಲಿ ಮೋಹಕವಾಗಿ ಕಾಣಿಸಿಕೊಂಡಿದ್ದು, ಹಾಸ್ಟೆಲ್ ಹುಡುಗರಿಗೆ ಪಾಠ ಮಾಡೋಕೆ ಬರೋ ಟೀಚರ್ ರೀತಿಯಲ್ಲಿಯೇ ರಮ್ಯಾ ನಟಿಸಿದ್ದಾರೆ.
ಧೂದ್ ಪೇಡ ದಿಗಂತ್ ಕೂಡ ಚಿತ್ರದಲ್ಲಿ ನಟಿಸಿದ್ದು, ಟೀಸರ್ನಲ್ಲಿ ಡಿಫರೆಂಟ್ ಆಗಿ ಕಾಣಿಸಿಕೊಂಡಿದ್ದಾರೆ. ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾವನ್ನು ನಿತಿನ್ ಕೃಷ್ಣಮೂರ್ತಿ ಕಥೆ ಬರೆದು ನಿರ್ದೇಶಿಸಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ಹಾಗೂ ಅರವಿಂದ್ ಛಾಯಾಗ್ರಹಣ ನೀಡಿದ್ದಾರೆ. ಹಾಸ್ಟೆಲ್ ಹುಡುಗರ ಸಿನಿಮಾವನ್ನು ರಕ್ಷಿತ್ ಶೆಟ್ಟಿ ತಮ್ಮದೇ ಪರಂವಃ ಪಿಕ್ಚರ್ಸ್ ಮೂಲಕ ತೆರೆಮೇಲೆ ತರುತ್ತಿದ್ದಾರೆ.