ಪ್ರಕೃತಿಗೆ ಸನಿಹದಲ್ಲಿರುವುದು ಯಾರಿಗೆ ತಾನೇ ಬೇಕಿಲ್ಲ ಹೇಳಿ? ಆದರೆ ನಾವು ಜಿಡಿಪಿ ಸೂಚಿತ ಆರ್ಥಿಕಾಭಿವೃದ್ಧಿಯ ಪಥದಲ್ಲಿ ಪರಿಸರ ಸಮತೋಲಿತ ವಾತಾವರಣವನ್ನೇ ಒತ್ತೆಯಾಗಿಟ್ಟುಬಿಟ್ಟಿದ್ದೇವೆ ಅಲ್ಲವೇ?
ಇಂದಿನ ಡಿಜಿಟಲ್ ಯುಗದಲ್ಲಿ ಆಗೊಮ್ಮೆ ಈಗೊಮ್ಮೆ ಜಂಗಲ್ ವೆಕೇಷನ್ ಹೆಸರಿನಲ್ಲಿ ಒಂದೆರಡು ದಿನ ಕಾಡಿನೊಳಗೆ ಮಾಡಿರುವ ರೆಸಾರ್ಟ್‌ಗಳಲ್ಲಿ ತಂಗಿದ್ದು ಬರುವುದೊಂದು ಶೋಕಿಯಾಗಿದೆ. ಹೀಗೆ ಮಾಡಿಯಾದರೂ ಅಲ್ಪ ಸ್ವಲ್ಪ ನಗರ ಜೀವನದ ಜಂಜಾಟದಿಂದ ಬಿಡುವು ಪಡೆಯುವ ಇರಾದೆ ನಮ್ಮ ನಗರವಾಸಿಗಳದ್ದು. ಆದರೆ ಈ ಹುಚ್ಚು ಎಲ್ಲೆಡೆ ಪಸರಿಸಿರುವ ಕಾರಣ ವೀಕೆಂಡ್‌ಗಳಲ್ಲಿ ಈ ಜಂಗಲ್ ರೆಸಾರ್ಟ್‌ಗಳೂ ಸಹ ವಿಪರೀತ ಜನಜಂಗುಳಿ ಕಂಡು ತಮ್ಮ ಶಾಂತಿಯನ್ನೇ ಕಳೆದುಕೊಂಡಿವೆ.
ಉತ್ತರ ಕ್ಯಾಲಿಫೋರ್ನಿಯಾದ ವ್ಯಕ್ತಿಯೊಬ್ಬರು ಪ್ರಕೃತಿಯ ನಡುವೆಯೇ ಜೀವಿಸುವ ಇರಾದೆಯಿಂದ ತಮ್ಮ ಕೆಲಸಕ್ಕೆ ಗುಡ್‌ಬೈ ಹೇಳಿ ದೂರದ ಹವಾಯಿ ದ್ವೀಪದಲ್ಲಿ ಕಾಡಿನಲ್ಲಿ ಮನೆಯೊಂದನ್ನು ಮಾಡಿಕೊಂಡು ವಾಸಿಸಲು ಆರಂಭಿಸಿದ್ದಾರೆ. ಮರದ ಮೇಲೊಂದು ಸರಳವಾದ ಪರಿಸರ ಸ್ನೇಹಿ ಮನೆಯಲ್ಲಿ ವಾಸಿಸುವ ಇವರು ನೀರಿಗಾಗಿ ಮಳೆಯನ್ನು ಅವಲಂಬಿಸಿದ್ದು, ತಮ್ಮ ಆಹಾರವನ್ನು ತಾವೇ ಬೆಳೆದುಕೊಂಡು ತಿನ್ನುತ್ತಾರೆ.
ಸೂಪರ್ ಮಾರ್ಕೆಟ್ ಒಂದರಲ್ಲಿ ಕ್ಯಾಶಿಯರ್ ಆಗಿದ್ದ 35 ವರ್ಷ ವಯಸ್ಸಿನ ರಾಬರ್ಟ್ ಬ್ರೆಟೊನ್ ’ಪ್ರಕೃತಿಯ ಮಡಿಲಲ್ಲಿ ತಮ್ಮನ್ನು ತಾವು ಸಂರಕ್ಷಿಸಿಕೊಳ್ಳಲು’ ಹೀಗೆ ಮಾಡಿದ್ದಾರೆ. 2011ರಿಂದಲೂ ಹೀಗೆ ರಿಮೋಟ್ ಆಗಿ ಬದುಕುತ್ತಿರುವ ರಾಬರ್ಟ್, ಇದಕ್ಕಾಗಿ ಸೂಕ್ತ ಜಾಗದ ಹುಡುಕಾಟದಲ್ಲಿ ಅಮೆರಿಕಾದ್ಯಂತ ವ್ಯಾನ್ ಒಂದರಲ್ಲಿ ಅಡ್ಡಾಡಿದ್ದರು.
ತಮ್ಮ ಮಾಸಿಕ ಟಿಕ್-ಟಾಕ್ ಆದಾಯದಲ್ಲಿ ಈ ಮನೆ ಖರೀದಿ ಮಾಡಿರುವ ರಾಬರ್ಟ್, 2020ರಿಂದ ಹವಾಯಿಯಲ್ಲಿ ತಳವೂರಿದ್ದು, $29,850 (₹ 24,69,857) ವ್ಯಯಿಸಿ ತುಂಡಗಲ ಭೂಮಿ ಹಾಗೂ ಪುಟ್ಟ ಮನೆ ಖರೀದಿಸಲು ಸಾಮಗ್ರಿಗಳನ್ನು ಒಟ್ಟುಗೂಡಿಸಿಕೊಂಡಿದ್ದಾರೆ.
ಕಾಡಿನಲ್ಲಿ ತಮ್ಮ ಜೀವನದ ಕುರಿತು ರಾಬರ್ಟ್ ನಿರಂತರವಾಗಿ ಸಾಮಾಜಿಕ ಜಾತಲಾಣದಲ್ಲಿ ವಿವರಿಸುತ್ತಲೇ ಇರುತ್ತಾರೆ. ಇದೇ ವೇಳೆ, ಕಾಡಿನ ಭೂಮಿಯಲ್ಲಿ ಆರೋಗ್ಯಯುತವಾದ ಆಹಾರವನ್ನು ಹೇಗೆ ಬೆಳೆಯುತ್ತಾರೆಂದು ರಾಬರ್ಟ್ ತಮ್ಮ ವೀಕ್ಷಕರಿಗೆ ವಿವರಿಸುತ್ತಿರುತ್ತಾರೆ.
ಇನ್ಸ್‌ಟಾಗ್ರಾಂನಲ್ಲಿ ಒಂದು ಲಕ್ಷಕ್ಕೂ ಅಧಿಕ ಅನುಯಾಯಿಗಳನ್ನು ಹೊಂದಿರುವ ರಾಬರ್ಟ್ ಪ್ರಕೃತಿಯ ಮಡಿಲಲ್ಲಿ ತಮ್ಮ ಜೀವನ ಹೇಗಿದೆ ಎಂದು ವಿಡಿಯೋಗಳು ಹಾಗೂ ಚಿತ್ರಗಳ ಮೂಲಕ ವಿವರಿಸುತ್ತಿರುತ್ತಾರೆ.