ಬೆಂಗಳೂರು: ನಾಮಫಲಕಗಳಲ್ಲಿ ಶೇಕಡ 60ರಷ್ಟು, ಕನ್ನಡ ಶೇಕಡ 40ರಷ್ಟು ಅನ್ಯ ಭಾಷೆ ಬಳಕೆಗೆ ಅವಕಾಶ ಕಲ್ಪಿಸಲು ನಿಯಮಕ್ಕೆ ತಿದ್ದುಪಡಿ ತಂದು ಸರ್ಕಾರದಿಂದ ಹೊರಡಿಸಿದ ಸುಗ್ರೀವಾಜ್ಞೆಗೆ ಅಂಕಿತ ಹಾಕಲು ರಾಜ್ಯಪಾಲರು ನಿರಾಕರಿಸಿದ್ದಾರೆ.
ಕನ್ನಡ ನಾಮಫಲಕ ನಿಯಮ ತಿದ್ದುಪಡಿ ಸುಗ್ರೀವಾಜ್ಞೆಗೆ ಅಂಕಿತ ಹಾಕದೇ ವಾಪಸ್ ಕಳಿಸಿದ್ದು, ನಿಧಾನ ಮಂಡಲ ಅಧಿವೇಶನ ಹತ್ತಿರ ಇದ್ದಾಗ ತರಾತುರಿಯಲ್ಲಿ ಸುಗ್ರೀವಾಜ್ಞೆ ಹೊರಡಿಸುವ ಔಚಿತ್ಯವೇನಿತ್ತು. ವಿಧಾನ ಮಂಡಲದಲ್ಲೇ ವಿದೇಯಕದ ಮೂಲಕ ಜಾರಿಗೆ ತರಬಹುದಿತ್ತಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಜನವರಿ 5ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಸುಗ್ರೀವಾಜ್ಞೆ ತರಲು ಅನುಮೋದನೆ ನೀಡಲಾಗಿತ್ತು. ನಾಮಫಲಕದಲ್ಲಿ ಕನ್ನಡ ಕಡೆಗಣಿಸಿದ್ದನ್ನು ವಿರೋಧಿಸಿ ಹೋರಾಟ ನಡೆಯುತ್ತಿದ್ದ ಸಂದರ್ಭದಲ್ಲಿ ಸರ್ಕಾರ ಕ್ರಮ ಕೈಗೊಂಡಿತ್ತು. ಫೆಬ್ರವರಿ 28 ರ ಒಳಗೆ ಹೊಸ ನೀತಿ ಅನುಷ್ಠಾನ ಮಾಡುವುದಾಗಿ ಸಿಎಂ ಹೇಳಿದ್ದರು.
ನಂತರ ಸಂಪುಟ ಸಭೆಯಲ್ಲಿ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ತಿದ್ದುಪಡಿ ವಿಧೇಯಕ 2024 ಸುಗ್ರೀವಾಜ್ಞೆಗೆ ಅನುಮೋದನೆ ನೀಡಲಾಗಿತ್ತು. ಫೆಬ್ರವರಿಯಲ್ಲಿ ಅಧಿವೇಶನ ನಡೆಯುವಾಗ ಶಾಸನ ಸಭೆಯಲ್ಲೇ ತಿದ್ದುಪಡಿ ವಿಧೇಯಕಕ್ಕೆ ಒಪ್ಪಿಗೆ ಪಡೆಯಬಹುದಲ್ಲವೇ? ಸುಗ್ರೀವಾಜ್ಞೆಗೆ ತರಾತುರಿ ಏಕೆ? ಶಾಸನಸಭೆ ಸದಸ್ಯರು ಚರ್ಚೆ ಮಾಡಿ ನಿರ್ಧರಿಸಬಹುದಲ್ಲವೇ? ಯಾವ ಸಂದರ್ಭ, ಯಾವ ವಿಷಯಕ್ಕೆ ಸುಗ್ರೀವಾಜ್ಞೆ ಹೊರಡಿಸಬೇಕು ಎನ್ನುವುದು ಮುಖ್ಯವಾಗುತ್ತದೆ. ಇದು ಆ ವ್ಯಾಪ್ತಿಗೆ ಬರುತ್ತದೆ ಎನ್ನುವುದನ್ನು ಯೋಚಿಸಬೇಕಿತ್ತಲ್ಲವೇ ಎಂದು ರಾಜ್ಯಪಾಲರು ಹೇಳಿದ್ದು ತಿದ್ದುಪಡಿ ಸುಗ್ರೀವಾಜ್ಞೆಗೆ ಅಂಕಿತ ಹಾಕಲು ನಿರಾಕರಿಸಿದ್ದಾರೆ.