ಯಾದಗಿರಿ: ಸಕಾಲಕ್ಕೆ ವೈದ್ಯರು ಸಿಗದೇ ಆಸ್ಪತ್ರೆ ಕಾರಿಡಾರ್ ನಲ್ಲಿಯೇ ಗರ್ಭಿಣಿಯೊಬ್ಬರು ಮಗುವಿಗೆ ಜನ್ಮ ನೀಡಿದ ಘಟನೆ ಯಾದಗಿರಿ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ.
ಶನಿವಾರ ತಡರಾತ್ರಿ 12 ಗಂಟೆ ವೇಳೆಗೆ ಹೆರಿಗೆ ನೋವಿನಿಂದ ಬಳಲುತ್ತಿದ್ದ ಗರ್ಭಿಣಿ ಚಾಂದ್ ಬೀ ಆಸ್ಪತ್ರೆಗೆ ಬಂದಿದ್ದಾರೆ. ಕುಟುಂಬದವರು ಆಸ್ಪತ್ರೆಗೆ ಕರೆದುಕೊಂಡು ಬಂದು ಆಸ್ಪತ್ರೆಯ ಸಿಬ್ಬಂದಿಗೆ ವಿಷಯ ತಿಳಿಸಿದ್ದಾರೆ. ಆದರೆ ಸಿಬ್ಬಂದಿ ಆಸ್ಪತ್ರೆಗೆ ಸೇರಿಸಿಕೊಳ್ಳಲು ನಿರ್ಲಕ್ಷ ತೋರಿದ್ದಾರೆ. ವೈದ್ಯರು ಕೂಡ ಆಸ್ಪತ್ರೆಯಲ್ಲಿ ಇರಲಿಲ್ಲ.
ಮಗು ಹೊರಬಂದ ಹಿನ್ನೆಲೆಯಲ್ಲಿ ಮಹಿಳೆಯೊಬ್ಬರ ಸಹಾಯದಿಂದ ಆಸ್ಪತ್ರೆಯ ಕಾರಿಡಾರ್ ನಲ್ಲಿಯೇ ಹೆರಿಗೆ ಮಾಡಿಸಲಾಗಿದೆ. ಪತಿ ನವಾಜ್ ವೈದ್ಯರನ್ನು ಕರೆದರೂ ಮತ್ತು ಆಸ್ಪತ್ರೆಗೆ ದಾಖಲಿಸಿಕೊಳ್ಳುವಂತೆ ಗೋಳಾಡಿದರೂ ಆಸ್ಪತ್ರೆಯ ಸಿಬ್ಬಂದಿ ವಿಳಂಬ ಧೋರಣೆ ಅನುಸರಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ತುಮಕೂರಿನ ಜಿಲ್ಲಾಸ್ಪತ್ರೆ ಸಿಬ್ಬಂದಿ ನಿರ್ಲಕ್ಷದಿಂದ ಹೆರಿಗೆಯಾದ ಬೆನ್ನಲ್ಲೇ ತಾಯಿ ಮತ್ತು ಅವಳಿ ಮಕ್ಕಳು ಸಾವನ್ನಪ್ಪಿದ ಘಟನೆ ಮರೆಯಾಗುವ ಮೊದಲೇ ಇಂತಹ ಘಟನೆ ನಡೆದಿದೆ. ಚಾಂದ್ ಬೀ ಅವರಿಗೆ ಹೆರಿಗೆಯಾದ ನಂತರ ಆಸ್ಪತ್ರೆಯ ಸಿಬ್ಬಂದಿ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆ ಒಳಗೆ ಸೇರಿಸಿಕೊಂಡಿದ್ದಾರೆ. ಅದೃಷ್ಟವಶಾತ್ ತಾಯಿ ಮಗು ಆರೋಗ್ಯದಿದ್ದಾರೆ.
ಹೆರಿಗೆಯ ಕೊನೆಯ ಗಳಿಗೆಯಲ್ಲಿ ಚಾಂದ್ ಬೀ ಆಸ್ಪತ್ರೆಗೆ ಬಂದಿದ್ದು, ಸಿಬ್ಬಂದಿ ಬರುವ ಮೊದಲೇ ಕಾರಿಡಾರ್ ನಲ್ಲಿ ಹೆರಿಗೆಯಾಗಿದೆ. ಹೆರಿಗೆಯಾದ ನಂತರ ತಾಯಿ ಮಗುವಿಗೆ ಚಿಕಿತ್ಸೆ ನೀಡಲಾಗಿದೆ ಎಂದು ಜಿಲ್ಲಾಸ್ಪತ್ರೆಯ ಸರ್ಜನ್ ಡಾ ರಿಜ್ವಾನಾ ಹೇಳಿದ್ದಾರೆ.
ಗೋಗರೆದರೂ ಆಸ್ಪತ್ರೆಯ ಸಿಬ್ಬಂದಿ ಸ್ಪಂದಿಸಲಿಲ್ಲ. ಮಹಿಳೆಯೊಬ್ಬರ ಸಹಾಯದಿಂದ ಕಾರಿಡಾರ್ ನಲ್ಲೇ ಹೆರಿಗೆ ಮಾಡಿಸಲಾಗಿದೆ. ನಾನು ಟವೆಲ್ ಅಡ್ಡ ಹಿಡಿದುಕೊಂಡೆ ಚಾಂದ್ ಬೀ ಪತಿ ನವಾಜ್ ತಿಳಿಸಿದ್ದಾರೆ.