ಹಾಸನ: ಸರ್ಕಾರಿ ಆಸ್ಪತ್ರೆಯಲ್ಲಿ ನವಜಾತ ಶಿಶು ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂದಿಯನ್ನು ಅರಕಲಗೂಡು ಠಾಣೆ ಪೊಲೀಸರು ಬಂಧಿಸಿದ್ದಾರೆ.
ಸುಮಾ, ಯಶವಂತ್, ಅರ್ಪಿತಾ, ಶೈಲಜಾ, ಸುಷ್ಮಾ, ಮತ್ತು ಪ್ರಕಾಶ್ ಬಂಧಿತ ಆರೋಪಿಗಳಾಗಿದ್ದಾರೆ. ಸುಮಾಗೆ ಮದುವೆಯಾಗಿ 5 ವರ್ಷವಾದರೂ ಮಕ್ಕಳಾಗಿರಲಿಲ್ಲ. ಇದರಿಂದಾಗಿ ಕುಟುಂಬದಲ್ಲಿ ಜಗಳವಾಗುತ್ತಿತ್ತು. ಮಗಳಿಗೆ ಮಗು ಕೊಡಿಸುವ ಸಲುವಾಗಿ ತಾಯಿ ಶೈಲಜಾ ಹಾಗೂ ಆಕೆಯ ಮಗ ಯಶವಂತ ಸಂಚು ರೂಪಿಸಿ ಮಗುವನ್ನು ಕಳ್ಳತನ ಮಾಡಿದ್ದಾರೆ.
ಅರ್ಪಿತಾ ನರ್ಸ್ ವೇಷಧರಿಸಿ ಯಶವಂತನ ಜೊತೆ ಸೇರಿ ಮಗುವನ್ನು ಕದ್ದು ಪರಾರಿಯಾಗಿದ್ದರು. ಅಸ್ಸಾಂ ಮೂಲದ ಯಾಸ್ಮಿನ್ ಮತ್ತು ಸಿರಾಜ್ ದಂಪತಿಗೆ ಮಾರ್ಚ್ 14ರಂದು ರಾತ್ರಿ ಸರ್ಕಾರಿ ಆಸ್ಪತ್ರೆಯಲ್ಲಿ ಗಂಡು ಮಗು ಜನಿಸಿತ್ತು. ನರ್ಸ್ ವೇಷದಲ್ಲಿದ್ದ ಅರ್ಪಿತಾ ಮಗುವಿಗೆ ಉಸಿರಾಟ ತೊಂದರೆಯಾಗಿದೆ ಔಷಧಿ ತೆಗೆದುಕೊಂಡು ಬನ್ನಿ ಎಂದು ಸಿರಾಜ್ ನನ್ನು ಹೊರಗೆ ಕಳುಹಿಸಿ, ಯಾಸ್ಮಿನ್ ಗೆ ಸುಳ್ಳು ಹೇಳಿ ಮಗುವನ್ನು ಕದ್ದು ಪರಾರಿಯಾಗಿದ್ದರು.
ಅರಕಲಗೋಡು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಸಿಸಿಟಿವಿ ದೃಶ್ಯಾವಳಿ ಮತ್ತು ಮೊಬೈಲ್ ಲೊಕೇಶನ್ ಆಧರಿಸಿ ಆರೋಪಿಗಳನ್ನು ಬಂಧಿಸಿದ್ದಾರೆನ್ನಲಾಗಿದೆ.