ಬೆಳಗಾವಿ: ಮದುವೆಗೆ ಮುನ್ನ ಜನಿಸಿದ ಮಗುವನ್ನು ತಂದೆ ತಾಯಿಯೇ ಮಾರಾಟ ಮಾಡಲು ಯತ್ನಿಸಿದ ಪ್ರಕರಣ ಬೆಳಕಿಗೆ ಬಂದಿದೆ.
ರಹಸ್ಯ ಕಾರ್ಯಾಚರಣೆ ನಡೆಸಿ ಪ್ರಕರಣ ಭೇದಿಸಿದ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲೂಕಿನ ನೇಗಿನಹಾಳದ ಮಹಾದೇವಿ ಬಾಹುಬಲಿ ಜೈನರ, ಚನ್ನಮ್ಮನ ಕಿತ್ತೂರಿನ ಡಾ. ಅಬ್ದುಲ್ ಗಫಾರ್ ಲಾಡಖಾನ್, ಬೈಲಹೊಂಗಲ ತಾಲೂಕಿನ ತುರಕರ ಶೀಗಿಹಳ್ಳಿಯ ಚಂದನ ಸುಬೇದಾರ, ಸಂಪಗಾವಿಯ ಪವಿತ್ರಾ ಮಡಿವಾಳರ, ಧಾರವಾಡ ತಾಲೂಕಿನ ಹೊಸಟ್ಟಿಯ ಪ್ರವೀಣ ಮಡಿವಾಳರ ಬಂಧಿತ ಆರೋಪಿಗಳಾಗಿದ್ದಾರೆ.
ಪವಿತ್ರಾ ಮತ್ತು ಪ್ರವೀಣ ಪರಸ್ಪರ ಪ್ರೀತಿಸುತ್ತಿದ್ದು, ಮದುವೆಗೆ ಮೊದಲೇ ಅವರಿಗೆ ಹೆಣ್ಣು ಮಗು ಜನಿಸಿತ್ತು. 30 ದಿನಗಳ ಶಿಶುವನ್ನು ಸೀಗೆಹಳ್ಳಿಯ ಚಂದನ ಸುಬೇದಾರನ ಮೂಲಕ ಮಾರಾಟಕ್ಕೆ ನಿರ್ಧರಿಸಿದ್ದರು. ಮಗುವನ್ನು ಮಹಾದೇವಿಯವರಿಗೆ ಕೊಟ್ಟಿದ್ದು, ನಂತರ ಡಾ. ಅಬ್ದುಲ್ ಗಫಾರ್ ಅವರಿಗೆ ಶಿಶು ಮಾರಾಟಕ್ಕೆ ಇರುವ ಮಾಹಿತಿ ನೀಡಿ 60 ಸಾವಿರ ರೂಪಾಯಿಗೆ ಶಿಶು ಮಾರಾಟಕ್ಕೆ ಮುಂದಾಗಿದ್ದರು.
ಮಾಹಿತಿ ತಿಳಿದ ಜಿಲ್ಲಾ ರಕ್ಷಣಾ ಘಟಕದ ಅಧಿಕಾರಿಗಳು ಶಿಶುವಿಗೆ 1.40 ಲಕ್ಷ ರೂಪಾಯಿ ನೀಡುವುದಾಗಿ ಹೇಳಿ ಬೆಳಗಾವಿಗೆ ಮಗು ತಂದು ಕೊಡುವಂತೆ ತಿಳಿಸಿದ್ದಾರೆ. ಮಹಾದೇವಿ ಶಿಶುವಿನೊಂದಿಗೆ ಬೆಳಗಾವಿಗೆ ಬಂದಾಗ ಬಂಧಿಸಲಾಗಿದೆ. ಮಗುವನ್ನು ರಕ್ಷಿಸಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.