ರಾಯಚೂರು: ಹೊಸ ವರ್ಷದ ಮೊದಲ ದಿನವೇ ನವಜಾತ ಶಿಶು ಬಾಣಂತಿ ಸಾವನ್ನಪ್ಪಿದ ಘಟನೆ ರಿಮ್ಸ್ ಬೋಧನಾ ಆಸ್ಪತ್ರೆಯಲ್ಲಿ ನಡೆದಿದೆ.
ರಾಯಚೂರಿನ ದೇವದುರ್ಗ ತಾಲೂಕಿನ ಮಸೀದಿಪುರ ಗ್ರಾಮದ ಬಾಣಂತಿ ಶಿವಲಿಂಗಮ್ಮ(21), ಅವರ 5 ದಿನದ ಮಗು ಮೃತಪಟ್ಟಿದೆ. ಹೆರಿಗೆ ನೋವಿನಿಂದ ಡಿಸೆಂಬರ್ 25 ರಂದು ರಿಮ್ಸ್ ಬೋಧನಾ ಆಸ್ಪತ್ರೆಗೆ ದಾಖಲೆಯಾಗಿದ್ದ ಶಿವಲಿಂಗಮ್ಮ ಮಗುವಿಗೆ ಜನ್ಮ ನೀಡಿದ್ದಾರೆ. ತೀವ್ರ ರಕ್ತಸ್ರಾವ ಮತ್ತು ರಕ್ತದೊತ್ತಡದಿಂದ ಬಳಲುತ್ತಿದ್ದ ಶಿವಲಿಂಗಮ್ಮ ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗಿತ್ತು.
ಬುಧವಾರ ಬೆಳಗ್ಗೆ ನವಜಾತ ಶಿಶು ಮೃತಪಟ್ಟಿದೆ. ಈ ಸುದ್ದಿ ತಿಳಿದ ತಾಯಿಯೂ ಅಘಾತದಿಂದ ಕೊನೆಯುಸಿರೆಳೆದಿದ್ದಾರೆ. ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿ ನಿರ್ಲಕ್ಷ್ಯದಿಂದ ಮಗು, ತಾಯಿ ಸಾವನ್ನಪ್ಪಿದ್ದಾರೆ ಎಂದು ಸಂಬಂಧಿಕರು ಆರೋಪಿಸಿದ್ದಾರೆ. ರಾಯಚೂರು ಜಿಲ್ಲೆಯಲ್ಲಿ ಕಳೆದ ಮೂರು ತಿಂಗಳಲ್ಲಿ ಮೃತಪಟ್ಟ ಬಾಣಂತಿಯರ ಸಂಖ್ಯೆ 11ಕ್ಕೆ ಏರಿಕೆಯಾಗಿದೆ.