![](https://kannadadunia.com/wp-content/uploads/2023/09/Kusina-mane.jpg)
ಬೆಂಗಳೂರು : ನರೇಗಾ ಕೂಲಿ ಕಾರ್ಮಿಕರ ಮಕ್ಕಳ ಲಾಲನೆ ಪೋಷಣೆಗಾಗಿ ಜಾರಿಮಾಡಿದ್ದ ‘ಕೂಸಿನ ಮನೆ’ ರಾಜ್ಯಾದ್ಯಂತ ಭಾರೀ ಯಶಸ್ಸು ಕಂಡಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಕೂಲಿ ಕಾರ್ಮಿಕರ ಮಹಿಳೆಯರು ತಾವು ಕೆಲಸಕ್ಕೆ ಹೋದ ಸಂದರ್ಭದಲ್ಲಿ ತಮ್ಮ ಮಕ್ಕಳ ಪೋಷಣೆ ಬಗ್ಗೆ ಕಾಡುತ್ತಿದ್ದ ಚಿಂತೆಯನ್ನು ಅರಿತ ಕಾಂಗ್ರೆಸ್ ಸರ್ಕಾರವು ಅವರ ಆತಂಕವನ್ನು ದೂರಮಾಡುವ ಸಲುವಾಗಿ ಕೂಸಿನ ಮನೆ ಯೋಜನೆಯನ್ನು ಜಾರಿಗೆ ತರಲಾಯಿತು ಎಂದರು.
ಈಗಾಗಲೇ ರಾಜ್ಯಾದ್ಯಂತ 3789 ಕೂಸಿನ ಮನೆಯನ್ನು ಪ್ರಾರಂಭಿಸಲಾಗಿದೆ. ಮಕ್ಕಳನ್ನು ಆರೈಕೆ ಮಾಡುವುದಕ್ಕಾಗಿ 22,445, ಕೇರ್ ಟೇಕರ್ಸ್’ಗಳನ್ನು ನೇಮಕ ಮಾಡಿಕೊಳ್ಳಲಾಗಿದ್ದು, ಇದರಲ್ಲಿ 20,172 ಕೇರ್ ಟೇಕರ್ಸ್’ಗಳಿಗೆ ತರಬೇತಿಯನ್ನು ನೀಡಲಾಗಿದೆ. ಇದರಿಂದ ಮಹಿಳೆಯರು ತಮ್ಮ ಮಕ್ಕಳನ್ನು ನಿಶ್ಚಿಂತೆಯಿಂದ ಕೂಸಿನ ಮನೆಯಲ್ಲಿ ಬಿಟ್ಟು ಕೆಲಸಕ್ಕೆ ಹೋಗಬಹುದು.
ಇನ್ನು ಕೂಸಿನಮನೆಯಲ್ಲಿ ಮಕ್ಕಳಿಗೆ, ಪೌಷ್ಠಿಕ ಆಹಾರ, ಶುದ್ಧ ಕುಡಿಯುವ ನೀರು, ಆಟ ಮತ್ತು ಪಾಠದ ಪರಿಕರಗಳನ್ನು ನೀಡುವುದರೊಂದಿಗೆ ಉತ್ತಮ ವಾತಾವರಣವನ್ನು ಸೃಷ್ಠಿಸಲಾಗುವುದು. ನಾಡಿನ ಮಕ್ಕಳ, ಮಹಿಳೆಯರ ಶ್ರೇಯೋಭಿವೃದ್ಧಿಗೆ ನಮ್ಮ ಸರ್ಕಾರ ಸದಾ ಕಾರ್ಯೋನ್ಮುಖವಾಗಿರಲಿದೆ ಎಂದು ತಿಳಿಸಿದ್ದಾರೆ.