ಕಾಬೂಲ್: ಅಫ್ಘಾನಿಸ್ತಾನದಿಂದ ಸ್ಥಳಾಂತರಿಸುವಾಗ ಸಿ -17 ಮಿಲಿಟರಿ ವಿಮಾನದಲ್ಲಿ ಜನಿಸಿದ ಅಫ್ಘಾನ್ ಹೆಣ್ಣು ಮಗು ಆ ಅನುಭವದ ನೆನಪನ್ನು ತನ್ನೊಂದಿಗೆ ಶಾಶ್ವತವಾಗಿ ಉಳಿಸಿಕೊಳ್ಳಲಿದೆ.
ಮಗುವಿನ ಪೋಷಕರು ವಿಮಾನದ ಕರೆ ಚಿಹ್ನೆ ‘ರೀಚ್’ ಎಂದು ನಾಮಕರಣ ಮಾಡಿದ್ದಾರೆ. ಯುಎಸ್ -ಯುರೋಪಿಯನ್ ಕಮಾಂಡ್ ಮುಖ್ಯಸ್ಥ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ್ದಾರೆ.
ಅಧಿಕಾರಿ ಜನರಲ್ ಟಾಡ್ ವೋಲ್ಟರ್ಸ್ ಹೇಳುವಂತೆ, ಪೋಷಕರು ‘ರೀಚ್’ ಎಂದು ಹೆಸರಿಸಲು ನಿರ್ಧರಿಸಿದ್ದಾರೆ. ಸಾರಿಗೆ ವಿಮಾನದ ಕರೆ ಚಿಹ್ನೆ ರೀಚ್ 828. ಆಫ್ಘಾನಿಸ್ಥಾನದಿಂದ ಸ್ಥಳಾಂತರದ ವೇಳೆ ಕಾಬೂಲ್‌ನಿಂದ ಜರ್ಮನಿಯ ರಾಮ್‌ಸ್ಟೈನ್ ಏರ್ ಬೇಸ್‌ಗೆ ವಿಮಾನ ಹಾರಾಟದಲ್ಲಿದ್ದ ವೇಳೆಯಲ್ಲೇ ಗರ್ಭಿಣಿ ಮಗುವಿಗೆ ಜನ್ಮ ನೀಡಿದ್ದರು. ಅವರಿಗೆ 86 ನೇ ವೈದ್ಯಕೀಯ ಗುಂಪಿನ ಸದಸ್ಯರು ಸಹಾಯ ಮಾಡಿದ್ದರು.
ಹಾರಾಟದ ಸಮಯದಲ್ಲಿ ಹೆರಿಗೆ ನೋವು ಕಾಣಿಸಿಕೊಂಡು ಗರ್ಭಿಣಿಗೆ ಕಡಿಮೆ ರಕ್ತದೊತ್ತಡ ಉಂಟಾಗಿದ್ದರಿಂದ ವಿಮಾನದಲ್ಲಿ ವಾಯು ಒತ್ತಡವನ್ನು ಹೆಚ್ಚಿಸಲು ಪೈಲಟ್ ಕಡಿಮೆ ಎತ್ತರದಲ್ಲಿ ವಿಮಾನ ಹಾರಿಸಿದ್ದರು. ಮಿಲಿಟರಿ ವೈದ್ಯಕೀಯ ಸಿಬ್ಬಂದಿ ನೆರವಿನಿಂದ ಮಗುವಿಗೆ ಜನ್ಮ ನೀಡಿದ್ದರು. ಮಗು ಮತ್ತು ಕುಟುಂಬದ ಎಲ್ಲರೂ ಉತ್ತಮ ಸ್ಥಿತಿಯಲ್ಲಿದ್ದಾರೆ ಎಂದು ವೋಲ್ಟರ್ಸ್ ಹೇಳುತ್ತಾರೆ.
ಕಳೆದ ವಾರ ಅಫ್ಘಾನಿಸ್ತಾನದಿಂದ ಸ್ಥಳಾಂತರಿಸಿದ ನಂತರ ಜರ್ಮನಿಯ ಯುಎಸ್ ಮಿಲಿಟರಿ ಆಸ್ಪತ್ರೆಯಾದ ಲ್ಯಾಂಡ್‌ಸ್ಟುಲ್ ಪ್ರಾದೇಶಿಕ ವೈದ್ಯಕೀಯ ಕೇಂದ್ರದಲ್ಲಿ ಇಬ್ಬರು ಮಕ್ಕಳು ಜನಿಸಿದ್ದಾರೆ.