ಕೊಪ್ಪಳ: ಹೆಣ್ಣು ಮಗು ಜನಿಸಿದೆ ಎಂದು ಘೋಷಿಸಿದ್ದ ವೈದ್ಯರು ವಾರದ ನಂತರ ಅನಾರೋಗ್ಯದಿಂದ ಶಿಶು ಮೃತಪಟ್ಟಿದೆ ಎಂದು ಗಂಡು ಮಗುವಿನ ಶವ ಕೊಟ್ಟಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿಯ ಗೌರಿ ಕನಕಗೊಲ್ಲರ ಅವರಿಗೆ ಸೆ. 26ರಂದು ಕೊಪ್ಪಳದ ತಾಯಿ ಮತ್ತು ಮಕ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆಯಾಗಿದೆ. ಹೆರಿಗೆ ಮಾಡಿಸಿದ ವೈದ್ಯರು ಮತ್ತು ಸಿಬ್ಬಂದಿ ಹೆಣ್ಣು ಮಗು ಜನಿಸಿದೆ ಎಂದು ತಿಳಿಸಿದ್ದಾರೆ.
ಅವಧಿ ಪೂರ್ವವಾಗಿ ಶಿಶು ಜನಿಸಿದ ಕಾರಣ ವಾರದ ನಂತರ ಮೃತಪಟ್ಟಿದೆ. ಶಿಶು ಶವವನ್ನು ಅಂತ್ಯಸಂಸ್ಕಾರ ಮಾಡಲು ಸ್ಮಶಾನಕ್ಕೆ ಒಯ್ದ ವೇಳೆ ಅದು ಗಂಡು ಎನ್ನುವುದು ಕುಟುಂಬದವರಿಗೆ ಗೊತ್ತಾಗಿದೆ. ಈ ರೀತಿ ಯಡವಟ್ಟು ಮಾಡಿದ ವೈದ್ಯರು ಮತ್ತು ಸಿಬ್ಬಂದಿಯನ್ನು ಕುಟುಂಬದವರು ತರಾಟೆಗೆ ತೆಗೆದುಕೊಂಡಿದ್ದಾರೆ.
ಅವಾಂತರದಿಂದ ಹೆಣ್ಣು ಮಗು ಎಂದಿದ್ದೇವೆ ಎಂದು ವೈದ್ಯರು ಹಾಗೂ ಸಿಬ್ಬಂದಿ ಸಮಜಾಯಿಷಿ ನೀಡಿದ್ದಾರೆ. ಘಟನೆಯ ಬಗ್ಗೆ ವಿಚಾರಣೆಗೆ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಕೃಷ್ಣ ಓಂಕಾರ ಅವರು ಸಮಿತಿ ರಚಿಸಿದ್ದಾರೆ. ಹೆರಿಗೆಯ ವೇಳೆ ಹಾಜರಾಗಿದ್ದ ಸಿಬ್ಬಂದಿ ಮತ್ತು ವೈದ್ಯರಿಗೆ ವಿಚಾರಣೆಗೆ ಹಾಜರಾಗಲು ಸೂಚಿಸಿದ್ದು, ಮೃತ ಶಿಶುವಿನ ಪಾಲಕರ ಡಿಎನ್ಎ ಪರೀಕ್ಷೆಗೆ ಕ್ರಮ ಕೈಗೊಳ್ಳಲಾಗಿದೆ.