ತಾಯಿ ಮತ್ತು ಮಗುವಿನ ನಡುವಿನ ಬಾಂಧವ್ಯ ಅಮೂಲ್ಯವಾದುದು. ಪ್ರಾಣಿ ಪ್ರಪಂಚದಲ್ಲೂ ಇದು ಅದೇ ರೀತಿ ಇರುತ್ತದೆ. ತಾಯಿಯನ್ನು ಬಿಟ್ಟುಹೋಗಲು ಒಪ್ಪದ ಮರಿ ಆನೆ, ತಾನು ರಕ್ಷಣೆಗೊಳಗಾದರೂ ಪದೇ ಪದೇ ತಾಯಿ ಆನೆ ಬಳಿ ಬರುತ್ತಲೇ ಇರುತ್ತದೆ. ಇಂತಹ ಹೃದಯಸ್ಪರ್ಶಿ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವೈರಲ್ ಆಗಿರುವ ವಿಡಿಯೋ ಕ್ಲಿಪ್ನಲ್ಲಿ, ಮರಿ ಆನೆಯು ಮಣ್ಣಿನ ಹೊಂಡದಲ್ಲಿ ಸಿಲುಕಿದ ತನ್ನ ತಾಯಿಯ ಕಡೆಗೆ ನಿರಂತರವಾಗಿ ಧಾವಿಸುತ್ತಿರುವುದನ್ನು ಕಾಣಬಹುದು.
ಐಎಫ್ಎಸ್ ಅಧಿಕಾರಿ ಸುಶಾಂತ ನಂದಾ ಅವರು ಹಂಚಿಕೊಂಡಿರುವ ವಿಡಿಯೋ ಇದಾಗಿದೆ. ಆನೆ ರಕ್ಷಕರ ಗುಂಪು ಕೆಸರಲ್ಲಿ ಸಿಲುಕಿದ್ದ ತಾಯಿ ಆನೆ ಮತ್ತು ಮರಿ ಆನೆಯನ್ನು ರಕ್ಷಿಸಲು ಮುಂದಾಗುತ್ತಾರೆ.
ಅವರು ಮೊದಲು ಮರಿಯಾನೆಯನ್ನು ರಕ್ಷಿಸಿ ಕೆಸರಿನ ಹೊಂಡದಿಂದ ಹೊರತೆಗೆಯುತ್ತಾರೆ. ಆದರೆ ಮರಿಯಾನೆ ಪದೇ ಪದೇ ತಾಯಿ ಆನೆ ಬಳಿ ಹೋಗಲು ಮುಂದಾಗುತ್ತದೆ.
ಕೊನೆಗೆ ಕಾರ್ಯಾಚರಣೆ ತಂಡವು ಮರಿ ಆನೆಯನ್ನು ಶಾಂತಗೊಳಿಸಿ ಸುದೀರ್ಘ ಪ್ರಯತ್ನಗಳ ನಂತರ ತಾಯಿ ಆನೆಯನ್ನು ಸುರಕ್ಷಿತವಾಗಿ ಗುಂಡಿಯಿಂದ ಮೇಲೆಳೆದು ರಕ್ಷಿಸುತ್ತಾರೆ. ಈ ವಿಡಿಯೋ ನೆಟ್ಟಿಗರ ಮನ ಗೆದ್ದಿದೆ.