ಶಿವಮೊಗ್ಗದ ಸಕ್ರೆಬೈಲು ಆನೆ ಬಿಡಾರದ ಆನೆ ಮರಿಗೆ ನಟ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹೆಸರನ್ನು ನಾಮಕರಣ ಮಾಡಲಾಗಿದೆ.
ಪುನೀತ್ ರಾಜಕುಮಾರ್ ಅವರಿಗೆ ಶ್ರದ್ಧಾಂಜಲಿ ಅರ್ಪಿಸುವ ಸಲುವಾಗಿ ಆನೆ ಮರಿಗೆ ಪುನೀತ್ ರಾಜಕುಮಾರ್ ಹೆಸರಿಡಲಾಗಿದೆ. ಸಾವಿಗೂ ಮುನ್ನ ಪುನೀತ್ ರಾಜ್ ಕುಮಾರ್ ಆನೆ ಬಿಡಾರಕ್ಕೆ ಭೇಟಿ ನೀಡಿದ್ದರು. ಅರಣ್ಯ ಇಲಾಖೆಯ ಸಾಕ್ಷ್ಯಚಿತ್ರದ ಚಿತ್ರೀಕರಣಕ್ಕಾಗಿ ಅಕ್ಟೋಬರ್ ಆರಂಭದಲ್ಲಿ ಪುನೀತ್ ರಾಜ್‌ಕುಮಾರ್ ಆನೆ ಶಿಬಿರಕ್ಕೆ ಭೇಟಿ ನೀಡಿದ್ದು, ಎರಡು ದಿನಗಳ ಕಾಲ ಸಕ್ರೆಬೈಲು ಬಿಡಾರದಲ್ಲಿ ಚಿತ್ರತಂಡದೊಂದಿಗೆ ತಂಗಿದ್ದರು.
ಅಕ್ಟೋಬರ್ 29 ರಂದು ಪುನೀತ್ ನಿಧನದ ನಂತರ ಸಕ್ರೆಬೈಲು ಆನೆ ಬಿಡಾರದ ಸಿಬ್ಬಂದಿ ಕಂಬನಿ ಮಿಡಿದಿದ್ದರು. ನಟನಿಗೆ ಗೌರವ ಸಲ್ಲಿಸಲು 2 ವರ್ಷ 2 ತಿಂಗಳ ಆನೆ ಮರಿಗೆ ಅಧಿಕೃತವಾಗಿ ಪುನೀತ್ ರಾಜ್ ಕುಮಾರ್ ಎಂದು ನಾಮಕರಣ ಮಾಡಲಾಗಿದೆ.
ಶಿವಮೊಗ್ಗ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಐ.ಎಂ.ನಾಗರಾಜ್ ಈ ಬಗ್ಗೆ ಮಾಹಿತಿ ನೀಡಿ, ಸಕ್ರೆಬೈಲು ಆನೆ ಬಿಡಾರಕ್ಕೆ ಪುನೀತ್ ಭೇಟಿಯ ವೇಳೆ ನೇತ್ರಾವತಿ ಆನೆಯ ಮರಿಯೊಂದಿಗೆ ಆಟವಾಡಿದ್ದರು. ಮತ್ತೆ ಭೇಟಿ ನೀಡುವುದಾಗಿ ಹೇಳಿದ್ದರು. ಅವರ ಗೌರವಾರ್ಥ ನೇತ್ರಾವತಿ ಆನೆಯ ಮರಿಗೆ ಅವರ ಹೆಸರನ್ನಿಡಲಾಗಿದೆ ಎಂದು ತಿಳಿಸಿದ್ದಾರೆ.