
ತಾಯಿ ತೋರುವ ಕಾಳಜಿ ಮತ್ತು ಪ್ರೀತಿಗೆ ಬೆಲೆ ಕಟ್ಟಲಾಗದು. ಇದು ಮನುಷ್ಯರದಾದರೂ ಅಷ್ಟೇ, ಪ್ರಾಣಿಗಳಾದರೂ ಅಷ್ಟೇ ತಾಯಿ ಪ್ರೀತಿ ಅಪರಿಮಿತ.
ತಾಯಂದಿರು ತಮ್ಮ ಮಗುವನ್ನು ಸುರಕ್ಷಿತವಾಗಿಡಲು ಯಾವುದೇ ಹಂತಕ್ಕೆ ಹೋಗಬಹುದು. ಇದಕ್ಕೊಂದು ಉದಾಹರಣೆಯಾಗಿ ವಿಡಿಯೋವೊಂದು ವೈರಲ್ ಆಗಿದೆ. ಐಎಎಸ್ ಅಧಿಕಾರಿ ಸುಪ್ರಿಯಾ ಸಾಹು ಅವರು ಟ್ವಿಟರ್ನಲ್ಲಿ ಹಂಚಿಕೊಂಡಿಡುವ ವಿಡಿಯೋದಲ್ಲಿ, ತಾಯಿ ಆನೆ ಮೊಸಳೆಯಿಂದ ತನ್ನ ಮರಿಯನ್ನು ರಕ್ಷಿಸಲು ಹೋರಾಡುವುದನ್ನು ನೋಡಬಹುದು.
ಹುಲ್ಲಿನಂತಿರುವ ಪ್ರದೇಶದಲ್ಲಿ ಆನೆಗಳು ಆಹಾರ ಅರಸುವಾಗ ಮೊಸಳೆಯಿಂದ ಮರಿ ಆನೆಯ ಸೊಂಡಿಲನ್ನು ಬಲವಾಗಿ ಹಿಡಿದುಕೊಳ್ಳುತ್ತದೆ. ಆನೆ ಮರಿ ಚೀರಾಡುತ್ತಿದ್ದಾಗ ಅಲ್ಲೇ ಇದ್ದ ತಾಯಿ ಆನೆ ರಕ್ಷಣೆಗೆ ಧಾವಿಸುತ್ತದೆ. ಈ ವಿಡಿಯೋ ನೋಡುಗರ ಎದೆಯನ್ನು ಝಲ್ಲೆನಿಸುವಂತಿದೆ.
ಕೊನೆಯಲ್ಲಿ ತಾಯಿ ಆನೆ, ಮರಿ ಆನೆಯನ್ನು ಬಿಡುವವರೆಗೂ ಮೊಸಳೆಯನ್ನು ತುಳಿಯುತ್ತದೆ. ಆ ಮೂಲಕ ತನ್ನ ಮರಿಯನ್ನು ಅದು ರಕ್ಷಿಸಿಕೊಳ್ಳುತ್ತದೆ. ಈ ವಿಡಿಯೋ ಸಾಕಷ್ಟು ವೀಕ್ಷಣೆ ಕಂಡಿದ್ದು, ನೆಟ್ಟಿಗರು ತಾಯಿಯ ಕಾಳಜಿಯನ್ನು ಮೆಚ್ಚಿ ಕಾಮೆಂಟ್ ಮಾಡಿದ್ದಾರೆ.