ಬಳ್ಳಾರಿ: ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಶಿಶುಗಳ ಸರಣಿ ಸಾವು ಎಂದು ಕೆಲವು ಮಾಧ್ಯಮಗಳಲ್ಲಿ ಪ್ರಸಾರವಾದ ವರದಿ ಸಂಪೂರ್ಣ ತಪ್ಪು ಮಾಹಿತಿಯಿಂದ ಕೂಡಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಚ್.ಎಲ್.ಜನಾರ್ಧನ್ ತಿಳಿಸಿದ್ದಾರೆ.
ಅಪೌಷ್ಠಿಕತೆಯಿಂದ, ವೈದ್ಯಕೀಯ ಸೌಲಭ್ಯಗಳ ಕೊರತೆಯಿಂದ ಶಿಶುಗಳ ಮರಣವಾಗುತ್ತಿವೆ ಎಂದು ಮಾಧ್ಯಮಗಳು ಅಧಿಕೃತವಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮೂಲಕ ವಾಸ್ತವ ವರದಿಯನ್ನು ಪಡೆದು ಭಿತ್ತರಿಸದೇ ಸಾರ್ವಜನಿಕರಿಗೆ ಅಸ್ಪಷ್ಟವಾದ ಮಾಹಿತಿ ನೀಡಿವೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕೃತ ಮಾಹಿತಿಯಂತೆ ಏಪ್ರಿಲ್ ನಿಂದ ನವೆಂಬರ್ ವರೆಗೆ ಒಟ್ಟು 30835 ಜೀವಂತ ಜನನಗಳು ಆಗಿದ್ದು, ಇವುಗಳಲ್ಲಿ 343 ಒಂದು ವರ್ಷದೊಳಗಿನ ಮಕ್ಕಳ ಮರಣ ಹೊಂದಿದ್ದು. ಬಳ್ಳಾರಿ ಜಿಲ್ಲೆಯಲ್ಲಿ ಪ್ರತಿ 1000 ಜೀವಂತ ಜನನಕ್ಕೆ ಈ ಮೊದಲು ಇದ್ದ 20ಕ್ಕೂ ಹೆಚ್ಚು ಮರಣ ಪ್ರಮಾಣವು ಪ್ರಸ್ತುತ 12ಕ್ಕೆ ಇಳಿದಿರುತ್ತದೆ ಎಂದು ಅವರು ತಿಳಿಸಿದ್ದಾರೆ.
ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ತಾಯಿ ಮತ್ತು ಮಗುವಿನ ಸೇವೆಗೆ ಸಂಬಂಧಿಸಿದಂತೆ ವೈದ್ಯಕೀಯ ಸೌಲಭ್ಯಗಳು ಮತ್ತು ತಜ್ಞ ವೈದ್ಯರ ಕೊರತೆ ಇರುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಅವರು, ಸಾರ್ವಜನಿಕರು ಯಾವುದೇ ರೀತಿಯ ಆತಂಕ, ಭಯ ಪಡುವ ಸನ್ನಿವೇಶ ಇರುವುದಿಲ್ಲ, ಸಾರ್ವಜನಿಕರು ತಮ್ಮ ಕುಟುಂಬದ ಗರ್ಭಿಣಿ, ಬಾಣಂತಿಯರು, ಮಕ್ಕಳ ಆರೈಕೆಗೆ ಸಂಬಂಧಿಸಿದಂತೆ ಉಚಿತವಾದ ಸೇವಾ ಸೌಲಭ್ಯಗಳನ್ನು ಜಿಲ್ಲೆಯ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಪಡೆಯಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.
ಸಾರ್ವಜನಿಕರಿಗೆ ಈ ರೀತಿಯ ಅಪೂರ್ಣ ಮಾಹಿತಿಯನ್ನು ಮತ್ತು ವಾಸ್ತವಿಕೆಗೆ ದೂರು ಇರುವ ಆತಂಕ ಉಂಟು ಮಾಡುವಂತಹ ವರದಿಗಳನ್ನು ಪ್ರಸಾರ ಮಾಡುವುದರಿಂದ ಸಾರ್ವಜನಿಕರಲ್ಲಿ ಅನಗತ್ಯ ಗೊಂದಲಗಳು ಉಂಟಾಗುವ ಸಾಧ್ಯತೆ ಇದ್ದು ವಸ್ತುನಿಷ್ಟವಾದ ವರದಿಯನ್ನು ಪ್ರಸಾರ ಮಾಡುವಂತೆ ಅವರು ಮನವಿ ಮಾಡಿದ್ದಾರೆ.