ದಾವಣಗೆರೆ: ನವಜಾತ ಹೆಣ್ಣು ಶಿಶುವಿನ ಕುತ್ತಿಗೆಗೆ ಹಗ್ಗ ಕಟ್ಟಿ ಕೊಂದು ನಿರ್ಜನ ಪ್ರದೇಶದಲ್ಲಿ ಎಸೆದ ಅಮಾನವೀಯ ಘಟನೆ ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕು ಕ್ಯಾಸನಕೆರೆ ಗ್ರಾಮದಲ್ಲಿ ನಡೆದಿದೆ.
ಗ್ರಾಮಕ್ಕೆ ಸಮೀಪದಲ್ಲಿರುವ ನಿರ್ಜನ ಪ್ರದೇಶದಲ್ಲಿ ನವಜಾತ ಹೆಣ್ಣು ಶಿಶುವಿನ ಮೃತ ದೇಹ ಕುತ್ತಿಗೆಗೆ ಹಗ್ಗ ಬಿಗಿದು ಕೊಲೆ ಮಾಡಿ ಪೊದೆಯಲ್ಲಿ ಎಸೆದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಇದನ್ನು ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಮುಳ್ಳುಕಂಟಿಗಳ ನಡುವೆ ಬಿದ್ದಿದ್ದ ಶಿಶುವಿನ ಮೃತದೇಹವನ್ನು ಸ್ಥಳೀಯರು ಹೊರಗೆ ತಂದಿದ್ದಾರೆ. ಕೃತ್ಯ ಎಸಗಿದವರು ಯಾರೆಂಬುದು ಗೊತ್ತಾಗಿಲ್ಲ. ಹೊನ್ನಾಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.