
ಬೆಂಗಳೂರು: ಆಟವಾಡುತ್ತಿದ್ದ ಮಗುವಿನ ಮೇಲೆ ಕಾರ್ ಹರಿದು ಮೃತಪಟ್ಟಿದೆ. ನೇಪಾಳ ಮೂಲದ ಜೋಗ್ ಜುತಾರ, ಅನಿತಾ ದಂಪತಿಗಳ ಮೂರು ವರ್ಷದ ಪುತ್ರಿ ಅರ್ಬಿನಾ ಮೃತಪಟ್ಟ ಮಗು.
ಬೆಂಗಳೂರಿನ ಕಸವನಹಳ್ಳಿಯ ಸಮೃದ್ಧಿ ಅಪಾರ್ಟ್ಮೆಂಟ್ ನಲ್ಲಿ ಡಿಸೆಂಬರ್ 10 ರಂದು ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಅಪಾರ್ಟ್ ಮೆಂಟ್ ಪಾರ್ಕಿಂಗ್ ನಿಂದ ಕಾರ್ ಹೊರಗೆ ಬರುವ ದಾರಿಯಲ್ಲಿ ಮಗು ಆಟವಾಡುವಾಗ ಘಟನೆ ನಡೆದಿದೆ. ಆಟವಾಡುತ್ತಿದ್ದ ಮಗುವನ್ನು ಕಾರ್ ಚಾಲಕ ಗಮನಿಸಿರಲಿಲ್ಲ. ಮಗುವಿನ ಮೇಲೆಯೇ ಕಾರ್ ಚಕ್ರಗಳು ಹರಿದಿವೆ.
ಗಂಭೀರವಾಗಿ ಗಾಯಗೊಂಡಿದ್ದ ಮಗುವನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಬಳಿಕ ಹಣಕಾಸಿನ ತೊಂದರೆ ಕಾರಣಕ್ಕೆ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಅರ್ಬಿನಾ ಮೃತಪಟ್ಟಿದ್ದಾಳೆ. ಘಟನೆಯ ದೃಶ್ಯಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.