
ತುಮಕೂರು: ತುಮಕೂರು ಬಸ್ ನಿಲ್ದಾಣದಲ್ಲಿ ಹೃದಯವಿದ್ರಾವಕ ಘಟನೆ ನಡೆದಿದೆ. ಮಗುವಿನ ಶವ ಸಾಗಿಸಲು ಹಣವಿಲ್ಲದೆ ಬಾಣಂತಿ ಮತ್ತು ಪೋಷಕರು ಕಣ್ಣೀರಿಟ್ಟಿದ್ದಾರೆ.
ಹಸುಗುಸಿನ ಮೃತದೇಹ ಸಾಗಿಸಲು ಕುಟುಂಬಸ್ಥರು ಪರದಾಟ ನಡೆಸಿದ್ದಾರೆ. ನಾಲ್ಕು ದಿನದ ಹಿಂದೆ ದಾವಣಗೆರೆ ಮೂಲದ ಗೌರಮ್ಮ ಜಿಲ್ಲಾಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದು, ಇವತ್ತು ಮುಂಜಾನೆ 4 ಗಂಟೆ ಸುಮಾರಿಗೆ ಮಗು ಅಸು ನೀಗಿದೆ.
ಮೃತದೇಹ ತೆಗೆದುಕೊಂಡು ಹೋಗುವಂತೆ ವೈದ್ಯರು ಹೇಳಿದ್ದಾರೆ. 40 ಕಿಲೋಮೀಟರ್ ಮಾತ್ರ ಆಂಬುಲೆನ್ಸ್ ನಲ್ಲಿ ಸಾಗಿಸುವುದಾಗಿ 108 ಆಂಬುಲೆನ್ಸ್ ಸಿಬ್ಬಂದಿ ತಿಳಿಸಿದ್ದಾರೆ. ದಾವಣಗೆರೆಗೆ ಹೋಗಲು ಪೋಷಕರು ಮಗುವಿನ ಶವದೊಂದಿಗೆ ಬಂದಿದ್ದು, ಸರ್ಕಾರಿ ಬಸ್ ನಲ್ಲಿ ಮೃತದೇಹ ಸಾಗಿಸಲು ಸಿಬ್ಬಂದಿ ಒಪ್ಪಿರಲಿಲ್ಲ.
ಇದರಿಂದ ಕಂಗಾಲಾದ ಕುಟುಂಬದವರು ಮೃತದೇಹ ಇಟ್ಟುಕೊಂಡು ಬಸ್ ನಿಲ್ದಾಣದಲ್ಲಿ ಕಣ್ಣೀರಿಟ್ಟಿದ್ದಾರೆ. ಕೊನೆಗೆ ಮಾಹಿತಿ ತಿಳಿದ ಜಿಲ್ಲಾ ಶಸ್ತ್ರ ಚಿಕಿತ್ಸಕಿ ಡಾ. ವೀಣಾ ಅವರು ವಾಹನ ವ್ಯವಸ್ಥೆ ಮಾಡಿ ದಾವಣಗೆರೆಗೆ ಕಳಿಸಿದ್ದಾರೆ ಎನ್ನಲಾಗಿದೆ.