ದೆಹಲಿಯ ಮಾಳವೀಯಾ ನಗರದ ರಸ್ತೆಯೊಂದರ ಬದಿಯಲ್ಲಿ ಢಾಬಾ ನಡೆಸಿಕೊಂಡು ಯೂಟ್ಯೂಬರ್ ಒಬ್ಬರ ಮೂಲಕ ದೇಶಾದ್ಯಂತ ಮನೆಮಾತಾಗಿದ್ದ ಬಾಬಾ ಕಾ ಢಾಬಾದ ಮಾಲೀಕ ತಮ್ಮ ಹೊಸ ರೆಸ್ಟೋರೆಂಟ್ನಲ್ಲಿ ಭಾರೀ ಲಾಸ್ ಮಾಡಿಕೊಂಡು ಮತ್ತದೇ ಹಳೆ ಜಾಗಕ್ಕೆ ಮರಳಿದ್ದಾರೆ.
ಬಾಬಾ ಕಾ ಢಾಬಾ ಖ್ಯಾತಿಯ ಕಾಂತಾ ಪ್ರಸಾದ್ ಹಾಗೂ ಆತನ ಪತ್ನಿ ಬದಾಮಿ ದೇವಿ ಕೋವಿಡ್ ಲಾಕ್ಡೌನ್ ಕಾರಣದಿಂದ ವ್ಯಾಪಾರವಿಲ್ಲದೆ ತಮ್ಮ ಹೊಸ ರೆಸ್ಟೋರೆಂಟ್ ಅನ್ನು ಫೆಬ್ರವರಿಯಲ್ಲಿ ಮುಚ್ಚಬೇಕಾಯಿತು. ಇದೀಗ ಅದೇ ಮಾಳವೀಯಾ ನಗರದ ರಸ್ತೆಯ ಬದಿಯಲ್ಲಿ ಢಾಬಾ ನಡೆಸಿಕೊಂಡು ಸಾಗುತ್ತಿದ್ದಾರೆ ಪ್ರಸಾದ್ ಮತ್ತು ಕುಟುಂಬ.
ಕಳೆದ ವರ್ಷ ಹೆಚ್ಚೂಕಡಿಮೆ ಇದೇ ಅವಧಿಯಲ್ಲಿ ಲಾಕ್ಡೌನ್ ಕಾರಣದಿಂದ ವ್ಯಾಪಾರವಿಲ್ಲದೇ ತಮ್ಮ ರಸ್ತೆಬದಿಯ ಢಾಬಾ ನಡೆಸಲು ಪರದಾಡುತ್ತಿದ್ದ ಪ್ರಸಾದ್ ನೆರವಿಗೆ ಬಂದಿದ್ದ ಯೂಟ್ಯೂಬರ್ ಗೌರವ್ ವಾಸನ್, ಪ್ರಸಾದ್ ಮತ್ತು ಅವರ ಪತ್ನಿಯ ಪರಿಸ್ಥಿತಿಯನ್ನು ವಿಡಿಯೋ ಮೂಲಕ ನೆಟ್ಟಿಗರಿಗೆ ಮನದಟ್ಟು ಮಾಡಿಸಿ, ಅವರ ನೆರವಿಗೆ ದೇಣಿಗೆ ನೀಡಲು ಕೋರಿದ್ದರು.
ಬಾಬಾರ ಪರಿಸ್ಥಿತಿ ಕಂಡು ಮುಮ್ಮಲ ಮರುಗಿದ್ದ ದೇಶವಾಸಿಗಳು ಆತನ ನೆರವಿಗೆ ನಿಂತು ದೇಣಿಗೆಗಳನ್ನು ಕಳುಹಿಸಿದ್ದರು. ಇದರ ಪರಿಣಾಮವಾಗಿ ಪ್ರಸಾದ್ ಬಳಿ ಲಕ್ಷಾಂತರ ರೂ. ಜಮೆಯಾಗಿ ಆತ ಹೊಸದೊಂದು ರೆಸ್ಟೋರೆಂಟ್ ತೆರೆದು, ಭಾರತೀಯ ಹಾಗೂ ಚೈನೀಸ್ ಖಾದ್ಯಗಳನ್ನು ಉಣಬಡಿಸಲು ಆರಂಭಿಸಿದ್ದರು.
ತಮ್ಮ ಹೊಸ ಬ್ಯುಸಿನೆಸ್ಗೆ ಐದು ಲಕ್ಷ ರೂ. ಹೂಡಿಕೆ ಮಾಡಿದ್ದ ಬಾಬಾಗೆ, ಪ್ರತಿ ತಿಂಗಳು ಕಟ್ಟಡದ ಬಾಡಿಗೆ, ಕೆಲಸಗಾರರ ಸಂಬಳ, ವಿದ್ಯುತ್, ನೀರಿನ ಬಿಲ್, ಅಡುಗೆಗೆ ಅಗತ್ಯ ಸಾಮಗ್ರಿಗಳಿಗೆಂದು ಒಂದು ಲಕ್ಷರೂ.ಗಳಷ್ಟು ಖರ್ಚಾಗುತ್ತಿತ್ತು. ಆದರೆ ರೆಸ್ಟೋರೆಂಟ್ನ ತಿಂಗಳ ಆದಾಯ 40,000 ರೂ. ದಾಟುತ್ತಿರಲಿಲ್ಲ.
ಪರಿಣಾಮವಾಗಿ ನಿರಂತರ ನಷ್ಟದತ್ತ ಸಾಗಿದ ಪ್ರಸಾದ್ ತಮ್ಮ ಹೊಸ ವ್ಯಾಪಾರಕ್ಕೆ ಗುಡ್ಬೈ ಹೇಳಿ ಅದೇ ಹಳೆಯ ಢಾಬಾಗೆ ಬಂದಿದ್ದಾರೆ. ಇದೀಗ ಅವರ ದಿನನಿತ್ಯದ ಆದಾಯವು 3,500 ರೂ.ಗಳಿಂದ 1,000 ರೂ.ಗಳಿಗೆ ಕುಸಿದಿದ್ದು, ಹತ್ತು ಮಂದಿಯ ತಮ್ಮ ಪರಿವಾರ ಸಾಕಲು ಪರದಾಡುತ್ತಿದ್ದಾರೆ.
ತಮ್ಮ ಪರಿಸ್ಥಿತಿಯನ್ನು ದೇಶವಾಸಿಗಳಿಗೆ ತೋರಿಸಿ ದೇಣಿಗೆ ಹರಿಯುವಂತೆ ಮಾಡಿದ ಗೌರವ್ ವಾಸನ್ ತಮ್ಮ ಹೆಸರು ಹೇಳಿಕೊಂಡು ದುಡ್ಡು ಮಾಡಿಕೊಳ್ಳುತ್ತಿದ್ದಾರೆ ಎಂದು ಆಪಾದಿಸಿದ್ದ ಪ್ರಸಾದ್, ಕೆಲ ದಿನಗಳ ಮಟ್ಟಿಗೆ ನೆಟ್ಟಿಗರ ಕಣ್ಣಿನಲ್ಲಿ ವಿಲನ್ ಆಗಿದ್ದರು.