ಬಿಹಾರದ ಮುಜಾಫರ್‌ಪುರದಲ್ಲಿ ನಾಪತ್ತೆಯಾಗಿದ್ದ ಮೂವರು ಹುಡುಗಿಯರು ನಾಲ್ಕು ದಿನಗಳ ನಂತರ ಉತ್ತರ ಪ್ರದೇಶದ ಮಥುರಾದ ಬಜ್ನಾ ಸೇತುವೆ ಬಳಿಯ ರೈಲ್ವೆ ಹಳಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಸ್ನೇಹಿತೆಯರಾಗಿದ್ದ ಮೂವರು ಹುಡುಗಿಯರನ್ನು ಒಂಬತ್ತನೇ ತರಗತಿಯ ವಿದ್ಯಾರ್ಥಿನಿಯರೆಂದು ಗುರುತಿಸಲಾಗಿದ್ದು ಅವರು ಹಿಮಾಲಯಕ್ಕೆ ಆಧ್ಯಾತ್ಮಿಕ ಪ್ರವಾಸಕ್ಕಾಗಿ ಹೊರಟಿದ್ದರಂತೆ .
ಮೂವರು ಬಾಲಕಿಯರನ್ನು ಗೌರಿ ಕುಮಾರಿ (14), ಮೋಹಿನಿ ಕುಮಾರಿ (14) ಮತ್ತು ಮಾಯಾ ಕುಮಾರಿ (13) ಎಂದು ಗುರುತಿಸಲಾಗಿದೆ. ಹುಡುಗಿಯರು ಮೇ 13, 2024 ರಂದು ತಮ್ಮ ನಿವಾಸದಿಂದ ಹೊರಡುವ ಮುನ್ನ ಪತ್ರದಲ್ಲಿ ಕಾರಣ ಬರೆದಿಟ್ಟು ಹೋಗಿದ್ದರು.
ಪತ್ರದ ಟಿಪ್ಪಣಿಯಲ್ಲಿ, “ಬಾಬಾ ಕರೆದಿದ್ದಾರೆ. ಆಧ್ಯಾತ್ಮಿಕ ಅನ್ವೇಷಣೆಗಾಗಿ ಹಿಮಾಲಯಕ್ಕೆ ಹೋಗುತ್ತಿದ್ದೇನೆ. ನಾವು ಮೂರು ತಿಂಗಳ ನಂತರ ಆಗಸ್ಟ್ 13 ರಂದು ಮನೆಗೆ ಹಿಂತಿರುಗುತ್ತೇವೆ.” ಎಂದು ಪತ್ರದಲ್ಲಿ ಬರೆದಿದ್ದರಂತೆ. ತಮ್ಮನ್ನು ಹುಡುಕದಂತೆ, ಒಂದು ವೇಳೆ ತಮಗಾಗಿ ಹುಡುಕಾಟ ನಡೆಸಿದರೆ ಆತ್ಮಹತ್ಯೆಗೆ ಪ್ರಯತ್ನಿಸುವುದಾಗಿ ಪತ್ರದಲ್ಲಿ ತಿಳಿಸಿದ್ದರು.
ಮಥುರಾದಲ್ಲಿ ಶವಗಳು ಪತ್ತೆಯಾದ ನಂತರ ಪೊಲೀಸರು ಮೂರು ಕುಟುಂಬಗಳಿಗೆ ಮಾಹಿತಿ ನೀಡಿದ್ದಾರೆ.
ತನಿಖೆಯ ಮೇಲ್ವಿಚಾರಣೆಗಾಗಿ ನಗರ ಪೊಲೀಸ್ ವರಿಷ್ಠಾಧಿಕಾರಿ ಅವದೇಶ್ ದೀಕ್ಷಿತ್ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ರಚಿಸಲಾಗಿದೆ. ಮಥುರಾ ಪೊಲೀಸರು ನಡೆಸಿದ ವಿಚಾರಣೆಯ ವೇಳೆ ರೈಲ್ವೇ ಹಳಿಗಳ ಮೇಲಿದ್ದ ಬಾಲಕಿಯರನ್ನು ಗುರುತಿಸಲು ಸಾಧ್ಯವಾಗಿರಲಿಲ್ಲ. ಪೊಲೀಸರು ಇತರ ಪೊಲೀಸ್ ಠಾಣೆಗಳಿಗೆ ಮಾಹಿತಿ ರವಾನಿಸಿದ ನಂತರ ಮೃತದೇಹಗಳನ್ನು ಗುರುತಿಸಲಾಯಿತು.
ಗೌರಿಕುಮಾರಿ ಮನೆಯಿಂದ ಹೊರಡುವಾಗ ಕೈಯಲ್ಲಿ ಮೆಹಂದಿ ಇರಲಿಲ್ಲ, ಆದರೆ ಆಕೆಯ ಕೈ ಮತ್ತು ಸ್ನೇಹಿತರ ಕೈಯಲ್ಲಿ ಇದೀಗ ಮೆಹೆಂದಿ ಕಂಡುಬಂದಿದೆ ಎಂದು ಗೌರಿ ತಾಯಿ ಗಮನಿಸಿದ್ದು ಪೊಲೀಸರಿಗೆ ತಿಳಿಸಿದ್ದಾರೆ. ಬಾಲಕಿಯರ ಮೊಬೈಲ್ ಫೋನ್ ಕೂಡ ನಾಪತ್ತೆಯಾಗಿದ್ದು, ಇನ್ನೂ ಪತ್ತೆಯಾಗಿಲ್ಲ. ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ.