ನವಜಾತ ಶಿಶುಗಳಿಗೆ ಆಧಾರ್ ಕಾರ್ಡ್ ಮಾಡಿಸುವ ಪಾಲಕರಿಗೆ ಖುಷಿ ಸುದ್ದಿಯೊಂದಿದೆ. ಆಧಾರ್ ಕಾರ್ಡ್ ಗೆ ಅಪ್ಲೈ ಮಾಡಲು ಜನನ ಪ್ರಮಾಣ ಪತ್ರದವರೆಗೆ ಕಾಯಬೇಕಾಗಿಲ್ಲ. ಆಸ್ಪತ್ರೆ ಡಿಸ್ಚಾರ್ಜ್ ಪ್ರಮಾಣಪತ್ರವನ್ನು ಬಳಸಿಕೊಂಡು ಆಧಾರ್ ಗೆ ಅರ್ಜಿ ಸಲ್ಲಿಸಬಹುದು.
ಯುನಿಕ್ ಐಡೆಂಟಿಫಿಕೇಶನ್ ಅಥಾರಿಟಿ ಆಫ್ ಇಂಡಿಯಾ, 5 ವರ್ಷದೊಳಗಿನ ಮಕ್ಕಳಿಗೆ ನೀಲಿ ಬಣ್ಣದ ಆಧಾರ್ ಕಾರ್ಡ್ ನೀಡುತ್ತದೆ. ಪೋಷಕರು ನವಜಾತ ಮಗುವಿಗೆ 12-ಅಂಕಿಯ ಆಧಾರ್ ಸಂಖ್ಯೆಯನ್ನು ಪಡೆಯಬಹುದು. ಪಾಲಕರು, ನವಜಾತ ಶಿಶುವಿಗಾಗಿ ಬಾಲ್ ಆಧಾರ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು, ಮಗುವಿನ ಜನನ ಪ್ರಮಾಣಪತ್ರ ಮತ್ತು ಯಾವುದೇ ಪೋಷಕರ ಆಧಾರ್ ಕಾರ್ಡ್ ಸಲ್ಲಿಸಬೇಕಾಗುತ್ತದೆ. ಆದ್ರೆ ಈಗ ಪೋಷಕರು ಶಿಶುವಿನ ಜನನ ಪ್ರಮಾಣಪತ್ರಕ್ಕಾಗಿ ಕಾಯುವ ಅಗತ್ಯವಿಲ್ಲ. ಜನನ ಪ್ರಮಾಣಪತ್ರದ ಬದಲು ಆಸ್ಪತ್ರೆ ಡಿಸ್ಚಾರ್ಜ್ ಪ್ರಮಾಣಪತ್ರವನ್ನು ದಾಖಲೆ ರೂಪದಲ್ಲಿ ನೀಡಬಹುದು.
ಯುಐಡಿಎಐ, ತನ್ನ ಟ್ವೀಟರ್ ಹ್ಯಾಂಡಲ್ ನಲ್ಲಿ ಈ ಬಗ್ಗೆ ಮಾಹಿತಿ ನೀಡಿದೆ. ಮಗುವಿನ ಆಧಾರ್ ಕಾರ್ಡ್ ಗೆ ಮಗುವಿನ ಜನನ ಪ್ರಮಾಣಪತ್ರ ಅಥವಾ ಆಸ್ಪತ್ರೆಯಿಂದ ಡಿಸ್ಚಾರ್ಜ್ ಸ್ಲಿಪ್ ಮತ್ತು ಪೋಷಕರಲ್ಲಿ ಒಬ್ಬರ ಆಧಾರ್ ಸಾಕು ಎಂದು ಟ್ವಿಟ್ ಮಾಡಿದೆ.