
ಚಿಕ್ಕಮಗಳೂರು: ಗೋಮಾಳ, ಕಾನು ಪ್ರದೇಶವನ್ನು ಅರಣ್ಯಕ್ಕೆ ಸೇರಿಸುವ ಪ್ರಯತ್ನ ನಡೆದಿದೆ ಎಂದು ಶೃಂಗೇರಿ ಶಾಸಕ ಟಿ.ಡಿ. ರಾಜೇಗೌಡ ಹೇಳಿದ್ದು, ಶೃಂಗೇರಿ ಭಾಗದ ಜನ ಆತಂಕದಲ್ಲಿದ್ದು, ಕಾನು, ಗೋಮಾಳ ಪ್ರದೇಶಗಳನ್ನು ಅರಣ್ಯಕ್ಕೆ ಸೇರಿಸಿದರೆ ಕೊಲೆ ಮಾಡುವುದಾಗಿ ನನಗೆ ಬೆದರಿಕೆ ಹಾಕಿದ್ದಾರೆ ಎಂದು ಹೇಳಿದ್ದಾರೆ.
ಕೆಡಿಪಿ ಸಭೆಯಲ್ಲಿ ಮಾತನಾಡಿದ ಅವರು, ಜನರ ಬದುಕಿಗೆ ಆತಂಕ ಎದುರಾಗಿರುವುದರಿಂದ ಅನಿವಾರ್ಯವಾಗಿ ಬೆದರಿಕೆ ಹಾಕಿದ್ದಾರೆ. ಇದರಲ್ಲಿ ತಪ್ಪಿಲ್ಲ. ಸರ್ಕಾರ ಕೂಡಲೇ ಸ್ಪಂದಿಸಿ ಪರ್ಯಾಯ ವ್ಯವಸ್ಥೆ ಕಲ್ಪಿಸಿದರೆ ಸಮಸ್ಯೆಗೆ ಪರಿಹಾರ ಸಿಗುತ್ತದೆ. ನಮಗೆ ಬೆದರಿಕೆಯೂ ಇರುವುದಿಲ್ಲ ಎಂದು ತಿಳಿಸಿದ್ದಾರೆ.
ಬೆದರಿಕೆ ಹಾಕಿದವರ ಹೆಸರನ್ನು ಹೇಳುವುದಿಲ್ಲ, ದೂರು ಕೂಡ ದಾಖಲಿಸುವುದಿಲ್ಲ. ಜೀವ ಕೈಯಲ್ಲಿ ಹಿಡಿದುಕೊಂಡು ಓಡಾಡಬೇಕಾದ ಪರಿಸ್ಥಿತಿ ಇದೆ ಎಂದು ತಿಳಿಸಿದ್ದಾರೆ.
ಶೃಂಗೇರಿ ತಾಲೂಕಿನ ಹಾದಿ ಕೆರೂರು ಸರ್ವೇ ನಂಬರ್ 11 ರಲ್ಲಿ 328 ಎಕರೆ ಗೋಮಾಳವಿದೆ. ಹಾದಿ ಗ್ರಾಮದ ಸರ್ವೆ ನಂಬರ್ 2 ರಲ್ಲಿ 234 ಎಕರೆ ಕಾನು ಇದೆ. ತಹಶೀಲ್ದಾರ್ ಅವರು ಮೋಜಣಿ ಮತ್ತು ಅರಣ್ಯ ಇಲಾಖೆಗೆ ಪತ್ರ ಬರೆದಿದ್ದು ಇದುವರೆಗೂ ಮೋಜನಿ ಮಾಡಿಲ್ಲ. ಗೋಮಾಳ, ಕಾನು ಜಾಗವನ್ನು ಅರಣ್ಯಕ್ಕೆ ಸೇರಿಸುವ ಪ್ರಯತ್ನ ನಡೆದಿದೆ ಎಂದು ಜನ ಆತಂಕದಲ್ಲಿದ್ದಾರೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ, ಕೊಲೆ ಬೆದರಿಕೆಗೆ ಸಂಬಂಧಿಸಿದಂತೆ ದೂರು ನೀಡಿದಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.