ಬೆಂಗಳೂರು: ಬಿಜೆಪಿ ನೂತನ ರಾಜ್ಯಾಧ್ಯಕ್ಷರಾಗಿ ಬಿ.ವೈ.ವಿಜಯೇಂದ್ರ ಆಯ್ಕೆಯಾಗುತ್ತಿದ್ದಂತೆಯೇ ರಾಜ್ಯ ಬಿಜೆಪಿಯಲ್ಲಿ ಸಂಚಲನ ಮೂಡಿದೆ. ಮೊದಲ ದಿನವೇ ಪಕ್ಷ ಸಂಘಟನೆ ನಿಟ್ಟಿನಲ್ಲಿ ವಿಜಯೇಂದ್ರ ಕಾರ್ಯಾರಂಭ ಮಾಡಿದ್ದಾರೆ.
ಬೆಳಿಗ್ಗೆಯೇ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಬೆಂಗಳೂರಿನ ಗಾಂಧಿನಗರದ ಬೂತ್ ಮಟ್ಟದ ಅಧ್ಯಕ್ಷ ಶಶಿಧರ್ ಅವರ ನಿವಾಸಕ್ಕೆ ಭೇಟಿ ನೀಡಿ, ಸಿಹಿ ಹಂಚಿ ದೀಪಾವಳಿ ಶುಭಾಷಯಗಳನ್ನು ಕೋರಿದರು. ಕೆಲಕಾಲ ಶಶಿಧರ್ ನಿವಾಸದಲ್ಲಿ ಸಮಾಲೋಚನೆ ನಡೆಸಿದರು. ಈ ಮೂಲಕ ಬೂತ್ ಮಟ್ಟದಿಂದ ಪಕ್ಷ ಸಂಘಟನೆ ಆರಂಭಿಸುವುದಾಗಿ ವಿಜಯೇಂದ್ರ ತಿಳಿಸಿದ್ದಾರೆ.
ಈ ವೇಳೆ ಮಾತನಾಡಿದ ವಿಜಯೇಂದ್ರ, ಬೂತ್ ಮಟ್ಟದ ನಿಷ್ಠಾವಂತ ಕಾರ್ಯಕರ್ತರೇ ಇಂದು ರಾಷ್ಟ್ರಾಧ್ಯಕ್ಷ ಕೂಡ ಆಗಿದ್ದಾರೆ. ಹಾಗಾಗಿ ನಮ್ಮ ಪಕ್ಷದಲ್ಲಿ ಬೂತ್ ಅಧ್ಯಕ್ಷರಿಗೂ ಒಂದೇ ರೀತಿ ಗೌರವ ಹಾಗೂ ರಾಷ್ಟ್ರಾಧ್ಯಕ್ಷರಿಗೂ ಒಂದೇ ರೀತಿ ಗೌರವ ಕೊಡುತ್ತೇವೆ. ಇದು ಬಿಜೆಪಿಯ ವಿಶೇಷ. ಬೂತ್ ಗೆದ್ದರೆ ರಾಷ್ಟ್ರ ಗೆಲ್ಲುತ್ತೇವೆ ಎಂಬುದು ನಡ್ಡಾ ಅವರ ಕಲ್ಪನೆ. ಹಾಗಾಗಿ ರಾಜ್ಯಾದ್ಯಂತ ಬೂತ್ ಅಧ್ಯಕ್ಷರ ಭೇಟಿ ಮೂಲಕವಾಗಿ ಪಕ್ಷವನ್ನು ಬಲಪಡಿಸಲಾಗುವುದು. ಬೂತ್ ಅಧ್ಯಕ್ಷ ಶಶಿಧರ್ ಒಬ್ಬ ನಿಷ್ಠಾವಂತ ಬಿಜೆಪಿ ಕಾರ್ಯಕರ್ತ. ಮೊದಲ ದಿನ ಅವರ ಮನೆಗೆ ಭೇಟಿ ಕೊಟ್ಟಿದ್ದು ಸಂತೋಷವಿದೆ ಎಂದರು.