ಬೆಂಗಳೂರು: ಕಾಂಗ್ರೆಸ್ ನಾಯಕರೊಂದಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎಂಬ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆರೋಪಕ್ಕೆ ಬಿ.ವೈ.ವಿಜಯೇಂದ್ರ ತಿರುಗೇಟು ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿ.ವೈ.ವಿಜಯೇಂದ್ರ, ಹೊಂದಾಣಿಕೆ ಮಾಡಿಕೊಂಡಿದ್ದರೆ ಬೆಂಗಳೂರಿನಿಂದ ಮೈಸೂರುವರೆಗೆ ಪಾದಯಾತ್ರೆ ನಡೆಯುತ್ತಿತ್ತಾ? ಎಂದು ಪ್ರಶ್ನಿಸಿದ್ದಾರೆ.
ವಿಜಯೇಂದ್ರ ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎಂದು ಈ ರೀತಿ ಹೇಳಿಕೆ ನೀಡಿ ಕಾರ್ಯಕರ್ತರಿಗೆ ಅಪಮಾನ ಮಾಡಲಾಗುತ್ತಿದೆ. ಹಿರಿಯ ನಾಯಕರನ್ನು, ಕಾರ್ಯಕರ್ತರನ್ನು ಈ ರೀತಿ ಅವಮಾನ ಮಾಡುವುದು ಸರಿಯಲ್ಲ. ವಿಜಯೇಂದ್ರಗೆ ಅಪಮಾನ ಮಾಡಲಿ ಆದರೆ ಆದರೆ ಕಾರ್ಯಕರ್ತರನ್ನು ಅಪಮಾನ ಮಾಡುವುದನ್ನು ಸಹಿಸಲ್ಲ ಎಂದು ಕಿಡಿಕಾರಿದರು.
ಮೊದಲ ಬಾರಿ ಶಾಸಕನಾಗಿ ಸರ್ಕಾರವನ್ನು ಒಂಟಿಕಾಲಲ್ಲಿ ನಿಲ್ಲಿಸುವ ಪ್ರಯತ್ನ ಮಾಡಿದ್ದೇವೆ. ಯಾವುದೋ ಎರಡು ಹೋರಾಟಕ್ಕೆ ಗೈರಾಗಿದ್ದೆ ಎಂಬ ಕಾರಣಕ್ಕೆ ಕಾಂಗ್ರೆಸ್ ನೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದೇನೆ ಎಂಬ ಆರೋಪ ಬೇಡ ಎಂದು ಗುಡುಗಿದ್ದಾರೆ.