ಬೆಂಗಳೂರು: ಸಿಎಂ ಸಿದ್ದರಾಮಯ್ಯನವರಿಗೆ ಜನರು, ರೈತರು ಸಲ್ಲಿಸಿದ್ದ ಮನವಿ ಪತ್ರ ಕಸದ ರಾಶಿಯಲ್ಲಿ ಪತ್ತೆಯಾಗಿರುವ ಘಟನೆ ಬಗ್ಗೆ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಕಿಡಿಕಾರಿದೆ.
ಜನರ ಸಮಸ್ಯೆಗೆ ಸ್ಪಂದಿಸದೇ, ಮನವಿ ಪತ್ರಗಳನ್ನು ಕಸದ ರಾಶಿಗೆ ಹಾಕುವ ಉಡಾಫೆ ವರ್ತನೆ ತೋರುವ ಕಾಂಗ್ರೆಸ್ ಸರ್ಕಾರಕ್ಕೆ ಜನತಾ ದರ್ಶನ ಎಂಬ ನಾಟಕ ಯಾಕೆ? ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಪ್ರಶ್ನಿಸಿದ್ದಾರೆ.
‘ಮುಖ್ಯಮಂತ್ರಿಗಳ ಬಳಿ ಹೋದರೆ ಸಮಸ್ಯೆ ಬಗೆಹರಿಯುತ್ತದೆ’ ಎಂಬ ಭರವಸೆಯಿಂದ ಬಹುದೂರದಿಂದ ಪ್ರಯಾಸಪಟ್ಟು ಬಂದು ಗಂಟೆಗಟ್ಟಲೆ ಸರತಿ ಸಾಲಲ್ಲಿ ನಿಂತು ಜನಸಾಮಾನ್ಯರು ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಪತ್ರಗಳನ್ನು ಸಲ್ಲಿಸುತ್ತಾರೆ. ಆದರೆ ಜನಸಾಮಾನ್ಯರ ಕಷ್ಟ-ಕಾರ್ಪಣ್ಯಗಳತ್ತ ಕಣ್ಣಾಡಿಸುವ ಮೊದಲೇ ಅವರ ಪತ್ರಗಳು ಕಸದ ರಾಶಿ ಸೇರಿರುವುದು ಜನರ ದೂರು-ದುಮ್ಮಾನಗಳಿಗೆ ಕಾಂಗ್ರೆಸ್ ಸರ್ಕಾರ ತೋರುತ್ತಿರುವ ಉಡಾಫೆ ವರ್ತನೆಗಳಿಗೆ ಕನ್ನಡಿ ಹಿಡಿದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜನಕಾಳಜಿಯ ಬಗ್ಗೆ ತಮ್ಮ ಹಳೆಯ ನೆನಪುಗಳನ್ನು ಉಲ್ಲೇಖಿಸುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೆರಳಿನಲ್ಲಿ ಜನರ ಬಗೆಗಿನ ತಾತ್ಸಾರ ನರ್ತಿಸುತ್ತಿರುವುದು ನಿಜಕ್ಕೂ ಆಶ್ಚರ್ಯವೆನಿಸಿದೆ, ಇಂಥಾ ಅಪಚಾರದ ಅಮಾನವೀಯ ಕೃತ್ಯ ಯಾರಿಂದಲೇ ನಡೆದಿದ್ದರೂ ಅದರ ನೇರ ಹೊಣೆ ಮುಖ್ಯಮಂತ್ರಿಗಳೇ ಹೊರಬೇಕಿದೆ,ಈ ನಿಟ್ಟಿನಲ್ಲಿ ನೈತಿಕ ಜವಾಬ್ದಾರಿಯಿಂದ ಜನರಿಗೆ ಅವರು ಉತ್ತರಿಸಬೇಕಿದೆ.
ಜನರ ಸಮಸ್ಯೆಗಳನ್ನು ಪರಿಹರಿಸುವ ವ್ಯವದಾನ ಇಲ್ಲದಿದ್ದರೆ ಜನತಾ ದರ್ಶನವೆಂಬ ಬೂಟಾಟಿಕೆಯ ನಾಟಕ ಬೇಕೆ ? ಎಂದು ಪ್ರಶ್ನಿಸಿದ್ದಾರೆ.