ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಭಂಡತನ ಬಿಟ್ಟು ಈಗಲಾದರೂ ರಾಜೀನಾಮೆ ನೀಡಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಗ್ರಹಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಜಯೇಂದ್ರ, ಸಿಎಂ ಸಿದ್ದರಾಮಯ್ಯ ನನ್ನ ಮೇಲೆ ಒಂದೇ ಒಂದು ಕಪ್ಪುಚುಕ್ಕೆ ಇಲ್ಲ. ಪ್ರಾಮಾಣಿಕವಾಗಿ ಆಡಳಿತ ನಡೆಸುತ್ತೇನೆ ಎಂದಿದ್ದರು. ಆದರೆ ಸಿಎಂ ವಿರುದ್ಧ ಮುಡಾ ಹಗರಣ ಪ್ರಕರಣ ದಾಖಲಾಗಿ ಲೋಕಾಯುಕ್ತ ತನಿಖೆ ಶುರುವಾದರೂ ಭಂಡತನ ಪ್ರದರ್ಶಿಸಿ ನಾನ್ಯಾಕೆ ರಾಜೀನಾಮೆ ಕೊಡಬೇಕೇಕು ಎನ್ನುತ್ತಿದ್ದಾರೆ. ಈಗ ಇಡಿ ಕೂಡ ಅಖಾಡಕ್ಕಿಳಿದಿದೆ. ಇಡಿ ದಾಳಿಯಾದರೂ ಸಿಎಂ ತನ್ನನ್ನು ನಿರಪರಾಧಿ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ. ಕೆಳಗೆ ಬಿದ್ದರೂ ಮೀಸೆ ಮಣ್ಣಾಗಿಲ್ಲ ಎಂದಂತಿದೆ ಸಿಎಂ ಸಿದ್ದರಾಮಯ್ಯನವರು ಭಂಡತನ ಬಿಟ್ಟು ರಾಜೀನಾಮೆ ಕೊಡಲಿ ಎಂದು ಒತ್ತಾಯಿಸಿದರು.
ಇನ್ನು ಕಾಲ ಮಿಂಚಿಲ್ಲ, ಕಾನೂನಿನ ಮೇಲೆ ಗೌರವ ಕಿಂಚಿತ್ತಾದರೂ ಇದ್ದರೆ ಸಿದ್ದರಾಮಯ್ಯನವರು ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು.
ಅಂದಿನ ಅಧಿಕಾರಿ ಕುಮಾರ್ ನಾಯಕ್ ಗೆ ಎಂಪಿ ಟಿಕೆಟ್ ಕೊಟ್ಟಾಗಲೇ ಅನುಮಾನವಿತ್ತು. ಸಿಎಂ ಅವರ ಕುಟುಂಬಕ್ಕೆ ಲಾಭ ಪಡೆದಿದ್ದಾರೆ ಅದಕ್ಕೆ ಬೆಂಬಲವಾಗಿ ನಿಂತಿದ್ದು ಕುಮಾರ್ ನಾಯಕ್. ಹೀಗಾಗಿ ಸಿದ್ದರಾಮಯ್ಯ ಟಿಕೆಟ್ ಕೊಟ್ಟಿದ್ದಾರೆ. ಹೈಕೋರ್ಟ್ ಕೂಡ ಅವರ ಪಾತ್ರ ಪರಿಗಣಿಸಿದೆ. ಮುಂದೆ ರಾಯಚೂರು ಸಂಸದ ಕುಮಾರ್ ನಾಯಕ್ ಕೂಡ ರಾಜೀನಾಮೆ ಕೊಡುವ ಸಮಯ ಬರಬಹುದು ಎಂದು ಹೇಳಿದರು.