
ಬೆಂಗಳೂರು: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಾಡಿರುವ ಆರೋಪಗಳ ಬಗ್ಗೆ ಪಟ್ಟಿ ಮಾಡಿದ್ದೇನೆ. ಅವರ ಎಲ್ಲಾ ಆರೋಪಗಳಿಗೂ ಒಮ್ಮೆಲೆ ಉತ್ತರ ಕೊಡುತ್ತೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿರುಗೇಟು ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿ.ವೈ.ವಿಜಯೇಂದ್ರ, ಯತ್ನಾಳ್ ಏನೇನು ಆರೋಪ ಮಾಡಿದ್ದಾರೋ ಎಲ್ಲವನ್ನೂ ಪಟ್ಟಿ ಮಾಡಿಕೊಂಡಿದ್ದೇನೆ. ಸಮಯ ಬಂದಾಗ ಎಲ್ಲದಕ್ಕೂ ಉತ್ತರ ಕೊಡುತ್ತೇನೆ. ಅವರು ಮಾಡುವ ಆರೋಪಗಳಿಗೆ , ಹೇಳಿಕೆಗಳಿಗೆ ಪ್ರತಿದಿನ ಉತ್ತರಿಸುತ್ತಾ ಕೂರಲಾಗುವುದಿಲ್ಲ. ಒಬ್ಬ ರಾಜ್ಯಾಧ್ಯಕ್ಷನಾಗಿ ನನಗೆ ಮಾಡಲು ಸಾಕಷ್ಟು ಕೆಲಸಗಳಿವೆ ಎಂದರು.
ಅವರು ಏನು ಮಾತನಾಡುತ್ತಾರೆ ಮಾತನಾಡಲಿ. ಏಕವಚನದಲ್ಲಿ ಮಾತನಾಡುತ್ತಾರೋ, ಬೇರೆ ಭಾಷೆಯಲ್ಲಿ ಮಾತನಾಡುತ್ತಾರೋ ಮಾತನಾಡಲಿ. ಅವರು ಹಿರಿಯರಿದ್ದಾರೆ. ನಾನು ಪಕ್ಷ ಸಂಘಟನೆ ಮಾಡುವ ಕೆಲಸ ಮಾಡುತ್ತೇನೆ. ಸಂದರ್ಭ ಬಂದಾಗ ಉತ್ತರ ಕೊಡುತ್ತೇನೆ ಎಂದು ಹೇಳಿದರು.