ಬೆಂಗಳೂರು: ಸಚಿವರ ಮೂಲಕ ಡಿಸಿಎಂ ವಿಚಾರ ಎತ್ತಿಸಿದ್ದೇ ಸಿಎಂ ಸಿದ್ದರಾಮಯ್ಯ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಿಜಯೇಂದ್ರ, ಜನರ ಕಷ್ಟ, ಸಮಸ್ಯೆ ಆಲಿಸುವುದನ್ನು ಬಿಟ್ಟು ಸಿಎಂ ಸಿದ್ದರಾಮಯ್ಯ ಅನಗತ್ಯವಾಗಿ ಡಿಸಿಎಂ ವಿಚಾರವನ್ನು ಸಚಿವರ ಮೂಲಕ ಎತ್ತಿಸಿದ್ದಾರೆ. ಈ ಮೂಲಕ ಡಿ.ಕೆ.ಶಿವಕುಮಾರ್ ವಿರುದ್ಧ ಷಡ್ಯಂತ್ರ ನಡೆಸಿದ್ದಾರೆ. ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬುಡಕ್ಕೆ ಬಂದಿದೆ ಎಂದು ಟೀಕಿಸಿದರು.
ಸಿದ್ದರಾಮಯ್ಯನವರು ಎಷ್ಟು ದಿನ ಸಿಎಂ ಆಗಿ ಇರ್ತಾರೆ ಗೊತ್ತಿಲ್ಲ. ಆದರೆ ರಾಜ್ಯದ ಅಭಿವೃದ್ಧಿ ಜೊತೆಗೆ ಜನರ ಸಮಸ್ಯೆಯನ್ನು ಸರ್ಕಾರ ಕೇಳಬೇಕು. ಈ ಬಗ್ಗೆ ಗಮನ ಹರಿಸುತ್ತಿಲ್ಲ ಎಂದು ನಾವು ಪ್ರಶ್ನೆ ಮಾಡಿದ್ದಕ್ಕೆ ಉಡಾಫೆ ಉತ್ತರ ಕೊಡುತ್ತಿದ್ದಾರೆ. ಸರ್ಕಾರದ ಬಗ್ಗೆ ಜನರು ವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆ. ಹಾದಿ ಬೀದಿಯಲ್ಲಿ ಸಿಎಂ, ಡಿಸಿಎಂ, ಸಚಿವರು ಹೊಡೆದಾಡಿಕೊಳ್ತಿದ್ದಾರೆ. ಹೀಗಾಗಿ ನಮ್ಮ ಮುಂದೆ ಈಗ ಇರುವುದು ಹೊರಾಟದ ದಿನಗಳು. ಮುಂದೆ ಸರ್ಕರಕ್ಕೆ ಬಿಸಿ ಮುಟ್ಟಿಸುವ ಕೆಲಸ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.