ಬೆಂಗಳೂರು: ರಾಜ್ಯದಲ್ಲಿ ರೈತರಿಂದ ಹಿಡಿದು ಪ್ರತಿಯೊಬ್ಬರೂ ಸಂಕಷ್ಟದಲ್ಲಿದ್ದಾರೆ. ಜನರ ಕಷ್ಟದ ಬಗ್ಗೆ ಗಮನ ಹರಿಸುವ ಬದಲು ಸಿಎಂ, ಡಿಸಿಎಂ, ಸಚಿವರೆಲ್ಲರೂ ಕಿತ್ತಾಟ ನಡೆಸುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿ.ವೈ.ವಿಜಯೇಂದ್ರ, ಬಿತ್ತನೆ ಬೀಜದ ದರ ಏರಿಕೆಯಾಗಿದೆ. ರಸಗೊಬ್ಬರದ ಸಮಸ್ಯೆ ಇದೆ. ರೈತರು ಸಂಕಷ್ಟದಲ್ಲಿದ್ದಾರೆ. ರಾಜ್ಯದ ಜನ ಸಂಕಷ್ಟದಲ್ಲಿದ್ದಾರೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿ ಜನ ಸಾಮಾನ್ಯರು ಜೀವನ ನಡೆಸುವುದೇ ದುಸ್ಥರವಾಗಿದೆ. ಇಂತಹ ಸಂದರ್ಭದಲ್ಲಿ ಸಿದ್ದರಾಮಯ್ಯ ಸರ್ಕಾರ ಜನರ ಕಷ್ಟ ಆಲಿಸುವುದನ್ನು ಬಿಟ್ಟು ಕುರ್ಚಿಗಾಗಿ ಹಾದಿ ಬೀದಿಯಲ್ಲಿ ಹೊಡೆದಾಡಿಕೊಳ್ಳುವ ಸ್ಥಿತಿ ತಲುಪಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಡಿಸಿಎಂ ಸ್ಥಾನ ಹೆಚ್ಚಳ ವಿಚಾರವಾಗಿ ಸಿಎಂ ಸಿದ್ದರಾಮಯ್ಯನವರೇ ಸಚಿವರ ಮೂಲಕ ಹೇಳಿಸಿದ್ದಾರೆ. ಅದಕ್ಕೆ ಈಗ ಸ್ವಾಮೀಜಿಯೊಬ್ಬರಿಂದ ಸಿದ್ದರಾಮಯ್ಯನವರಿಗೆ ಸಿಎಂ ಸ್ಥಾನ ಬಿಟ್ಟುಕೊಡಲು ಡಿ.ಕೆ.ಶಿವಕುಮಾರ್ ಹೇಳಿಸಿದ್ದಾರೆ. ಲೋಕಸಭಾ ಚುನಾವಣೆ ವೇಳೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಒಟ್ಟಾಗಿ ಓಡಾಡಿ ಒಗ್ಗಟ್ಟು ಪ್ರದರ್ಶಿಸಿದ್ದೇನು? ಈಗ ಒಬ್ಬೊರಿಗೊಬ್ಬರು ಪರೋಕ್ಷವಾಗಿ ಹೊಡೆದಾಡುತ್ತಿದ್ದಾರೆ. ಡಿಸಿಎಂ ಹುದ್ದೆ ಬಗ್ಗೆ ಹೇಳಿಸಿದ್ದಕ್ಕೆ ಈಗ ಸಿಎಂ ಸಿದ್ದರಾಮಯ್ಯ ಬುಡಕ್ಕೆ ಬಂದಿದೆ. ಕೆಲವರು ಹೇಳುತ್ತಾರೆ ಮೂರು ಜನ ಡಿಸಿಎಂ ಆಗಬೇಕು, ಇನ್ನು ಕೆಲವರು ಐದು ಡಿಸಿಎಂ ಸ್ಥಾನ ಬೇಕು ಎಂದು. ಕುರ್ಚಿಗಾಗಿ ಕಿತ್ತಾಟ ನಡೆದಿದೆ. ಈ ಸರ್ಕಾರಕ್ಕೆ ಬಿಜೆಪಿ ಬಿಸಿ ಮುಟ್ಟಿಸಲಿದೆ ಎಂದರು.
ನಮ್ಮ ಮುಂದೆ ಈಗಿರುವುದು ಹೋರಾಟದ ದಿನಗಳು. ಜನರ ಕಷ್ಟದ ಬಗ್ಗೆ, ರಾಜ್ಯದ ಅಭಿವೃದ್ಧಿ ಬಗ್ಗೆ ಕಾಂಗ್ರೆಸ್ ಸರ್ಕಾರಕ್ಕೆ ಗಮನವಿಲ್ಲ ಎಂದಮೇಲೆ ಹೋರಾಟ ಅನಿವಾರ್ಯ. ಮುಂದೆ ನಾವು ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಕೆಲಸ ಮಾಡುತ್ತೇವೆ ಎಂದು ಹೇಳಿದ್ದಾರೆ.