ಬೆಂಗಳೂರು: ವಾಲ್ಮೀಕಿ ನಿಗಮದಲ್ಲಿ ಬಹುಕೋಟಿ ಹಗರಣ, ಮುಡಾ ನಿವೇಶನ ಹಂಚಿಕೆಯಲ್ಲಿ 4-5 ಸಾವಿರ ಕೋಟಿ ಹಗರಣ ನಡೆದಿದೆ. ಸಿಎಂ ಸಿದ್ದರಾಮಯ್ಯ ಮೊದಲು ರಾಜೀನಾಮೆ ನೀಡಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಗ್ರಹಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿ.ವೈ.ವಿಜಯೇಂದ್ರ, ಮುಡಾದಲ್ಲಿ ದೊಡ್ಡ ಹಗರಣ ನಡೆದಿದೆ. ಬಿಜೆಪಿ ನಾಯಕರು ಮೈಸೂರು ಚಲೋ ನಡೆಸಿದ್ದೇವೆ. ಆದರೆ ಪ್ರತಿಭಟನೆ ಹತ್ತಿಕ್ಕುವ ಕೆಲಸ ಮಾಡುವ ಮೂಲಕ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಲು ಸರ್ಕಾರ ಹೊರಟಿದೆ. ಮೂಡಾದಲ್ಲಿ ಅಕ್ರಮವೇ ನಡೆದಿಲ್ಲ ಎನ್ನುವುದಾದರೆ ಸಿಬಿಐ ತನಿಖೆಗೆ ಕೊಡಲು ಭಯ ಯಾಕೆ? ಎಂದು ಪ್ರಶ್ನಿಸಿದರು.
ಈಗಾಗಲೇ ಸಿಎಂ ಸ್ಥಾನಕ್ಕಾಗಿ ಕಿತ್ತಾಟ ನಡೆಯುತ್ತಿದೆ. ಮತ್ತೊಂದೆಡೆ ಮುಡಾ ಅಕ್ರಮ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ವಿರುದ್ಧ ಆರೋಪ ಕೇಳಿಬಂದಿದೆ. ವಾಲ್ಮೀಕಿ ನಿಗಮ ಹಗರಣದಲ್ಲಿ ಸಚಿವರ ರಾಜೀನಾಮೆ ಆಗಿದೆ. ಸರ್ಕಾರ ಯಾವುದೇ ಕ್ಷಣದಲ್ಲಿ ಬೀಳಬಹುದು ಎಂದು ಹೇಳಿದರು.
ಸಿಎಂ ಸಿದ್ದರಾಮ್ಯಯ್ಯ ಅವರಿಗಿಂತ ಅನೇಕ ಹಿಂದುಳಿದ ನಾಯಕರಿದ್ದಾರೆ. ಮುಖ್ಯಮಂತ್ರಿ ಸ್ಥಾನಕ್ಕೆ ಅನೇಕರು ಟವೆಲ್ ಹಾಕಿದ್ದಾರೆ. ಈಗಾಗಲೇ ಓರ್ವ ಸಚಿವರ ಬಂಧನವಾಗಿದೆ. ಹಗರಣಗಳ ಹೊಣೆಹೊತ್ತು ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಲಿ. ಬೇರೊಬ್ಬರನ್ನು ಸಿಎಂ ಮಾಡಲಿ ಎಂದರು.