ಚಿತ್ರದುರ್ಗ: ಪುತ್ರ ಕಾಂತೇಶ್ ಗೆ ಲೋಕಸಭಾ ಚುನಾವಣೆ ಬಿಜೆಪಿ ಟಿಕೆಟ್ ಕೈತಪ್ಪಿದ್ದಕ್ಕೆ ಬಿಜೆಪಿ ವಿರುದ್ಧ ಬಂಡಾಯ ಸಾರಿರುವ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಶಿವಮೊಗ್ಗದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಇದು ಬಿಜೆಪಿ ನಾಯಕರಿಗೆ ಸಂಕಷ್ಟ ತಂದೊಡ್ಡಿದೆ.
ಬಂಡಾಯ ಅಭ್ಯರ್ಥಿಯಾಗಿ ಈಶ್ವರಪ್ಪ ಸ್ಪರ್ಧೆ ವಿಚಾರವಾಗಿ ಚಿತ್ರದುರ್ಗದಲ್ಲಿ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಈಶ್ವರಪ್ಪ ಅವರನ್ನು ಕೇಂದ್ರದ ವರಿಷ್ಠರು ಮನವರಿಕೆ ಮಾಡುವ ವಿಶ್ವಾಸವಿದೆ. ಈಶ್ವರಪ್ಪನವರದ್ದು ಏನೇ ಇದ್ದರು ಕೇಂದ್ರ ನಾಯಕರು ನೋಡಿಕೊಳ್ತಾರೆ ಎಂದು ಹೇಳಿದರು.
ನಾನು ವೈಯಕ್ತಿಕವಾಗಿ ಈಶ್ವರಪ್ಪ ಅವರನ್ನು ಭೇಟಿಯಾಗಿ ಮಾತನಾಡಲು ಸಾಧ್ಯವಾಗಿಲ್ಲ. ರಾಜ್ಯದ 28 ಕ್ಷೇತ್ರಗಳಲ್ಲಿಯೂ ಬಿಜೆಪಿ ಪರ ಅಲೆಯಿದೆ. 28 ಕ್ಷೇತ್ರಗಳಲ್ಲಿಯೂ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದು ಹೇಳಿದರು.