ಬೆಂಗಳೂರು: ಕೋವಿಡ್ ಸಂದರ್ಭದಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾದ ಪಿಪಿಇ ಕಿಟ್ ಖರೀದಿ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹಾಗೂ ಮಾಜಿ ಸಚಿವ ಶ್ರೀರಾಮುಲು ವಿರುದ್ಧ ಪ್ರಾಸಿಕ್ಯೂಷನ್ ಗೆ ತನಿಖಾ ಆಯೋಗ ಶಿಫಾರಸು ಮಾಡಿರುವ ವಿಚಾರವಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ವಿಜಯೇಂದ್ರ, ಆಯೋಗಗಳನ್ನು ರಚಿಸಿ ತಮಗೆ ಅನುಕೂಲಕರವಾದ ವರದಿ ಪಡೆದುಕೊಳ್ಳುವಲ್ಲಿ ಕಾಂಗ್ರೆಸ್ ನಾಯಕರು ನಿಸ್ಸೀಮರು ಎಂದು ಕಿಡಿಕಾರಿದ್ದಾರೆ.
ತಮ್ಮ ಸಚಿವರು, ಶಾಸಕರನ್ನು ಹೇಗೆ ರಕ್ಷಿಸಿಕೊಳ್ಳಬೇಕು? ಎದುರಾಳಿಗಳನ್ನು ರಾಜಕೀಯವಾಗಿ ಹೇಗೆ ಮುಗಿಸಬೇಕು? ಯಾವ ರೀತಿ ಆಯೋಗಗಳನ್ನು ರಚಿಸಬೇಕು? ಯಾವ ರೀತಿ ವರದಿ ನಿಡಬೇಕು ಎಂಬುದರಲ್ಲಿ ಕಾಂಗ್ರೆಸ್ಸಿಗರು ಹಾಗೂ ಸಿದ್ದರಾಮಯ್ಯನವರು ನಿಸ್ಸೀಮರಿದ್ದಾರೆ ಎಂದರು.
ಇಂತಹ ಆರೋಪಗಳಿಗೆ, ತನಿಖೆಗಳಿಗೆ ಯಡಿಯೂರಪ್ಪ ಆಗಲಿ, ಬಿಜೆಪಿಯಾಗಲಿ ಹೆದರುವುದಿಲ್ಲ ಎಂದು ಹೇಳಿದರು.
ಮುಡಾ ಹಗರಣದ ಬಗ್ಗೆ ಲೋಕಾಯುಕ್ತ ತನಿಖೆಗೆ ಸಿಎಂ ಸಿದ್ದರಾಮಯ್ಯ ಹಾಜರಾಗುವ ಮುನ್ನ ಲೋಕಾಯುಕ್ತದಲ್ಲಿ ತಮಗೆ ಬೇಕಾದ ತನಿಖಾಧಿಕರಿಗಳನ್ನು ಹೇಗೆ ಮನವರಿಕೆ ಮಾಡಿಕೊಂಡು, ಸಿದ್ದರಾಮಯ್ಯ ಶೂರರಂತೆ ತನಿಖೆ ಎದುರಿಸಿದ್ದಾರೆ. ಸಿದ್ದರಾಮಯ್ಯ ಅವರಾಗಲಿ, ಕಾಂಗ್ರೆಸ್ ನವರಾಗಲಿ ಯಡಿಯೂರಪ್ಪ ವಿರುದ್ಧ ಇಂತಹ ಸಾಕಷ್ಟು ಕುತಂತ್ರಗಳನ್ನು ನಡೆಸಿದ್ದಾರೆ ಇದಕ್ಕೆಲ್ಲ ಹೆದರಲ್ಲ ಎಂದರು.